October 14, 2026
Wednesday, October 14, 2026
spot_img

ಮೂವರು ಮಕ್ಕಳಿದ್ದರೂ ಅನಾಥರಾದ ವೃದ್ಧ ದಂಪತಿ: ‘ವೃದ್ಧಾಶ್ರಮಕ್ಕಾದರೂ ಕಳುಹಿಸಿ’ ಎಂದು ಕಣ್ಣೀರು

ಹೊಸದಿಗಂತ ವರದಿ ಹಾಸನ:

ಹೆತ್ತ ಮಕ್ಕಳನ್ನು ಸಾಕಿ, ಬೆಳೆಸಿ, ಮದುವೆ ಮಾಡಿ ಜವಾಬ್ದಾರಿ ನಿಭಾಯಿಸಿದ ವೃದ್ಧ ದಂಪತಿಗೆ ಇದೀಗ ಅದೇ ಮಕ್ಕಳಿಂದ ಆಸರೆ ಇಲ್ಲದಂತಾಗಿದೆ. ಪಾರ್ಶ್ವವಾಯುವಿನಿಂದ ಆರು ವರ್ಷಗಳಿಂದ ಹಾಸಿಗೆ ಹಿಡಿದಿರುವ ಪತ್ನಿಯ ಆರೈಕೆಯ ಜತೆಗೆ ಹಸಿವು, ಅನಾರೋಗ್ಯ ಹಾಗೂ ಮಗನ ಹಿಂಸೆ ಎದುರಿಸುತ್ತಿರುವ 86 ವರ್ಷದ ರೇವಣ್ಣ ಸಿದ್ದಪ್ಪ, “ನಮ್ಮನ್ನು ವೃದ್ಧಾಶ್ರಮಕ್ಕಾದರೂ ಕಳುಹಿಸಿ” ಎಂದು ಕಣ್ಣೀರಿಟ್ಟಿದ್ದಾರೆ.

ಹಾಸನ ತಾಲ್ಲೂಕಿನ ನಿಟ್ಟೂರು ಗ್ರಾಮದ ರೇವಣ್ಣ ಸಿದ್ದಪ್ಪ ಹಾಗೂ ಜಯಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿಯಿದ್ದಾರೆ. ಎಲ್ಲರಿಗೂ ಮದುವೆ ಮಾಡಿ ಜವಾಬ್ದಾರಿ ಮುಗಿಸಿದರೂ ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.

ಎರಡು ಹೊತ್ತಿನ ಊಟಕ್ಕೂ ಪರದಾಟ

ಶಿಥಿಲಾವಸ್ಥೆಯ ಮನೆಯಲ್ಲಿರುವ ದಂಪತಿಗೆ ಎರಡು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಬದುಕಿನ ಕೊನೆಯ ಆಸರೆಯಾಗಿರುವ ಜಮೀನನ್ನು ಹಂಚಿಕೆ ಮಾಡುವಂತೆ ಮಕ್ಕಳು ಒತ್ತಡ ಹೇರುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು. ಹಿರಿಯ ಮಗ ಮದ್ಯ ಸೇವಿಸಿ ಬಂದು ಹಲ್ಲೆ ನಡೆಸುತ್ತಿದ್ದು, ಈ ಕುರಿತು ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಸೂಕ್ತ ರಕ್ಷಣೆ ದೊರೆತಿಲ್ಲ ಎಂದು ದೂರಿದರು.

ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು. ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ರಕ್ಷಣೆ ಒದಗಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಅಗತ್ಯ ಆರೈಕೆ ಕಲ್ಪಿಸುವ ಜತೆಗೆ ತಮ್ಮಿಬ್ಬರಿಗೂ ಸುರಕ್ಷಿತ ಜೀವನ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ ಅವರು, ‘ಮಕ್ಕಳಿಂದ ಹಿಂಸೆ ಅನುಭವಿಸುವುದಕ್ಕಿಂತ ವೃದ್ಧಾಶ್ರಮದಲ್ಲಾದರೂ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಿ’ ಎಂದು ಕಣ್ಣೀರಿಟ್ಟರು.

Must Read