August 31, 2026
Monday, August 31, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ । ‘ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಅನ್ನ ನೀಡುತ್ತದೆ’: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನ್ನ ಹಾಗೂ ಅಮ್ಮ ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ತಂದೆ-ತಾಯಿಗಳು ಹೊರಗಿನಿಂದ ನಮ್ಮನ್ನು ಪೋಷಿಸಿದರೆ, ದೇಹದ ಒಳಗೂ ಹೋಗಿ ಪೋಷಿಸುವ ಶಕ್ತಿ ಆಹಾರಕ್ಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಸೋಮವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.

ಗಂಗೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಅದು ಕೇವಲ H₂O ಎನಿಸಬಹುದು. ಆದರೆ ಸೂಕ್ಷ್ಮ ದೃಷ್ಟಿಯಲ್ಲಿ ಗಂಗೆಯು ಗಂಗಾ ಮಾತೆಯಾಗಿ ಕಾಣುತ್ತಾಳೆ. ಅದೇ ರೀತಿ ಆಹಾರವನ್ನು ಕೇವಲ ‘Food’ ಎಂದು ನೋಡಿದರೆ ಅದು ಆಹಾರವಾಗಿಯೇ ಉಳಿಯುತ್ತದೆ. ಆದರೆ ಅದನ್ನು ಅನ್ನಪೂರ್ಣೇಶ್ವರಿ ಹಾಗೂ ಬ್ರಹ್ಮಸ್ವರೂಪ ಎಂದು ಭಾವಿಸಿದಾಗ ಅದರ ಪರಿಣಾಮವೂ ಅದ್ಭುತವಾಗಿರುತ್ತದೆ ಎಂದರು.

ಹೆತ್ತ ತಾಯಿಯನ್ನು ಗೌರವಿಸುವಂತೆ ಅನ್ನವನ್ನೂ ಗೌರವಿಸಬೇಕು. ಆಹಾರ ನಿರ್ಜೀವ ಭೌತಿಕ ವಸ್ತುವಲ್ಲ. ನಾವು ಅದನ್ನು ಯಾವ ದೃಷ್ಟಿಯಿಂದ ನೋಡುತ್ತೇವೆಯೋ, ಅದೇ ರೀತಿಯ ಪರಿಣಾಮವನ್ನು ನೀಡುತ್ತದೆ. ಸಂಪತ್ತಿನ ವಿಚಾರದಲ್ಲಿ ಜನರು ಎಂದಿಗೂ ‘ಸಾಕು’ ಎನ್ನುವುದಿಲ್ಲ. ಆದರೆ ಆಹಾರದ ವಿಚಾರದಲ್ಲಿ ಒಂದು ಹಂತದ ಬಳಿಕ ಪ್ರತಿಯೊಬ್ಬರೂ ‘ಸಾಕು’ ಎನ್ನಲೇಬೇಕು. ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಅನ್ನ ನೀಡುತ್ತದೆ. ನೆಮ್ಮದಿ ನೀಡುವುದು ದೇವರ ಲಕ್ಷಣವಾಗಿದ್ದು, ಅನ್ನದಲ್ಲೂ ಪರಮಾತ್ಮನ ಅನೇಕ ಲಕ್ಷಣಗಳಿವೆ ಎಂದು ಶ್ರೀಗಳು ಹೇಳಿದರು.

ಖ್ಯಾತ ಸಾಹಿತಿಗಳಾದ ಚಿಂತಾಮಣಿ ಕೊಡ್ಲೆಕೆರೆ, ಖ್ಯಾತ ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ, ಶಿವಮೊಗ್ಗ ಹವ್ಯಕ ಸಂಘ ಅಧ್ಯಕ್ಷ ಪೂರ್ಣಾನಂದ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಲಕ್ಷ್ಮೀನಾರಾಯಣ ಪಕಳಕುಂಜ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ವೇ.ಮೂ. ಸುಬ್ರಾಯ ಭಟ್ಟ ಅಗ್ನಿಹೋತ್ರಿ, ವೇ.ಮೂ. ಮಂಜುನಾಥ ಭಟ್ಟ ಜಲಗದ್ದೆ, ದಿನಪ್ರಧಾನರಾಗಿ ಡಾ. ಪುರುಷೋತ್ತಮ ಭಟ್ ದಂಪತಿಗಳು ಉಪಸ್ಥಿತರಿದ್ದರು.

ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಲುತ್ತಿರುವ ಅಮ್ಮಕೊಡವ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು.ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಭಕ್ತರು ಸಮರ್ಪಿಸುವ ಫಲವು ಅವರ ಭಕ್ತಿಯ ಪ್ರತೀಕವಾದರೆ, ಗುರುಗಳು ಅನುಗ್ರಹಿಸುವ ಮಂತ್ರಾಕ್ಷತೆಯು ಗುರುಪರಂಪರೆಯ ಆಶೀರ್ವಾದದ ಪ್ರತೀಕವಾಗಿದೆ. ಗುರುಪೀಠದ ಆಶೀರ್ವಾದದಿಂದ ಅಮ್ಮಕೊಡವ ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸಿದರು.

ಅಮ್ಮಕೊಡವ ಸಮಾಜ ಅಧ್ಯಕ್ಷರಾದ ಬಾಣಂಡ ಎನ್. ಪ್ರಥ್ಯು, ಬಿ. ಎಸ್. ರಘು, ⁠ಬಿ. ಎಸ್. ಪ್ರವೀಣ ಸೇರಿದಂತೆ ನೂರಾರು ಗುರುಬಂಧುಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar