ಇವತ್ತಿನ ದಿನಗಳಲ್ಲಿ ಜೇಬಿನಲ್ಲಿ ಚಿಲ್ಲರೆ ಇಲ್ಲದಿದ್ದರೂ ಚಿಂತೆ ಇಲ್ಲ, ಕೈಯಲ್ಲಿ ಒಂದೊಳ್ಳೆ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಇಡೀ ಪ್ರಪಂಚವನ್ನೇ ಸುತ್ತಾಡಬೋದು. ರಸ್ತೆ ಪಕ್ಕದ ಅಂಗಡಿಯಿಂದ ಹಿಡಿದು ದೊಡ್ಡ ಸೂಪರ್ ಮಾರ್ಕೆಟ್ವರೆಗೆ ನಾವೆಲ್ಲರೂ ದಿನಕ್ಕೆ ಕನಿಷ್ಠ ಐದಾರು ಬಾರಿಯಾದರೂ ಮಾಡುವ ಕೆಲಸ ಒಂದೇ.. ಫೋನ್ ತೆಗೆಯುವುದು, ಆ ಕಪ್ಪು-ಬಿಳಿ ಚೌಕಟ್ಟಿಗೆ ಕ್ಯಾಮೆರಾ ತೋರಿಸೋದು, ‘ಪಿನ್’ ಹಾಕಿ ‘ಟಿಂಗ್’ ಅಂತ ಸೌಂಡ್ ಬರುತ್ತೆ, ಪೇಮೆಂಟ್ ಸಕ್ಸಸ್!

ಆದರೆ, ಒಮ್ಮೆಯಾದರೂ ಯೋಚನೆ ಮಾಡಿದ್ದೀರಾ? ಆ ಸಣ್ಣ ಚೌಕದ ಒಳಗಿರೋ ಕಪ್ಪು-ಬಿಳಿ ಗೀಚುಗಳಿಗೆ ನಮ್ಮ ಫೋನ್ ಕ್ಯಾಮೆರಾ ಮುಟ್ಟಿಸಿದ ತಕ್ಷಣ, ಯಾವ ಅಂಗಡಿಯವನಿಗೆ ಎಷ್ಟು ದುಡ್ಡು ಹೋಗಬೇಕು ಅಂತ ಫೋನ್ಗೆ ಹೇಗೆ ಗೊತ್ತಾಗುತ್ತೆ? ಆ ಚುಕ್ಕೆಗಳ ಒಳಗೆ ಎಂಥಹ ಮಾಯಾಜಾಲ ಅಡಗಿದೆ? ದಿನವೂ ಬಳಸುವ ಈ ಕ್ಯೂಆರ್ ಕೋಡ್ ಮತ್ತು ಯುಪಿಐ ಪೇಮೆಂಟ್ ಹಿಂದಿರೋ ಆ ಮ್ಯಾಜಿಕ್ ವಿಜ್ಞಾನವಾದ್ರೂ ಏನು?

ಏನಿದು ಕ್ಯೂಆರ್ ಕೋಡ್?
‘QR’ ಅಂದರೆ Quick Response ಎಂದು ಅರ್ಥ. ನಾವು ಬಿಸ್ಕಿಟ್ ಇಲ್ಲ ಅಂದ್ರೆ ಸೋಪ್ ಮೇಲೆ ಹಳೆಯ ಬಾರ್ಕೋಡ್ ನೋಡಿದ್ದೆವಲ್ಲ, ಇದು ಅದರ ನೆಕ್ಸ್ಟ್ ಲೆವೆಲ್ ತಂತ್ರಜ್ಞಾನ. ಬಾರ್ಕೋಡ್ನಲ್ಲಿ ಮಾಹಿತಿ ಕೇವಲ ಎಡದಿಂದ ಬಲಕ್ಕೆ ಇರುತ್ತಿತ್ತು. ಆದರೆ ಕ್ಯೂಆರ್ ಕೋಡ್ನಲ್ಲಿ ಮೇಲಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ ಎರಡೂ ಕಡೆ ಮಾಹಿತಿ ಅಡಗಿರುತ್ತೆ. ಅದಕ್ಕೆ ಇದನ್ನು ‘2D ಕೋಡ್’ ಎನ್ನುತ್ತಾರೆ. ಅದಕ್ಕೇ ಇದರೊಳಗೆ ಬಾರ್ಕೋಡ್ಗಿಂತ 300 ಪಟ್ಟು ಹೆಚ್ಚು ಡೇಟಾ ತುಂಬಿಸಿಡಬಹುದು. ಆ ಚಿಕ್ಕ ಚೌಕದಲ್ಲಿ ಅಂಗಡಿಯವನ ಬ್ಯಾಂಕ್ ಅಕೌಂಟ್ ನಂಬರ್, ಹೆಸರು, ಐಎಫ್ಎಸ್ಸಿ ಕೋಡ್ ಎಲ್ಲವೂ ಅಡಗಿರುತ್ತೆ.

ಕ್ಯೂಆರ್ ಕೋಡ್ ಒಳಗೇನೇನಿದೆ?
ಯಾವುದೇ ಕ್ಯೂ-ಆರ್ ಕೋಡ್ ಸರಿಯಾಗಿ ಗಮನಿಸಿ, ಅದರ ಮೂರು ಮೂಲೆಗಳಲ್ಲಿ ಮೂರು ದೊಡ್ಡ ಚೌಕಗಳಿರುತ್ತೆ. ಅದ್ಯಾಕೆ ಅಂತ ಯಾವತ್ತಾದ್ರೂ ಯೋಚನೆ ಮಾಡಿದೀರಾ? ನೀವು ಫೋನ್ ಉಲ್ಟಾ ಇಟ್ಕೊಂಡು ಸ್ಕ್ಯಾನ್ ಮಾಡಿದ್ರೂ, ಅಥವಾ ಅಡ್ಡ-ದಿಡ್ಡಿ ಹಿಡಿದ್ರೂ ಪೇಮೆಂಟ್ ಆಗುತ್ತೆ. ನಿಮ್ಮ ಕ್ಯಾಮೆರಾಗೆ ನನ್ ಮುಖ ಇರೋದು ಈ ಕಡೆ, ಇದೇ ಆಂಗಲ್ನಲ್ಲಿ ಸ್ಕ್ಯಾನ್ ಮಾಡು ಅಂತ ಹೇಳೋದೇ ಈ ಮೂರು ಚೌಕಗಳು. ಇದನ್ನ ಟೆಕ್ನಿಕಲ್ ಆಗಿ Position Markers ಅಂತಾರೆ.

ಕಪ್ಪು-ಬಿಳುಪು ಚುಕ್ಕಿಗಳ ಲಾಜಿಕ್ ಏನು?
ನಮ್ಮ ಕಣ್ಣಿಗೆ ಅದು ಬರೀ ಕಪ್ಪು-ಬಿಳುಪಿನ ರಂಗೋಲಿ ತರ ಕಾಣುತ್ತೆ, ಆದ್ರೆ ಕಂಪ್ಯೂಟರ್ಗೆ ಅದು ಬರೀ ‘0’ ಮತ್ತು ‘1’. ಬಿಳಿ ಭಾಗ ಎಂದರೆ ‘0’, ಕಪ್ಪು ಭಾಗ ಎಂದರೆ ‘1’.ನಿಮ್ಮ ಮೊಬೈಲ್ ಕ್ಯಾಮೆರಾ ಆ ಬೆಳಕಿನ ಆಟವನ್ನು ಓದಿ, ಅದನ್ನ ನಂಬರ್ ಮತ್ತು ಅಕ್ಷರಗಳಾಗಿ ಕನ್ವರ್ಟ್ ಮಾಡುತ್ತೆ. ಆಕ್ಷಣವೇ ನಿಮ್ಮ ಸ್ಕ್ರೀನ್ ಮೇಲೆ ಯಾರಿಗೆ ಪೇ ಮಾಡ್ಬೇಕೊ ಅವರ ಹೆಸರು ಕಾಣಿಸುತ್ತೆ.
ಸ್ಕ್ಯಾನ್ ಮಾಡಿದಾಗ ಒಳಗಡೆ ಏನೇನ್ ಆಗುತ್ತೆ?
ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಓಪನ್ ಮಾಡಿ ಕ್ಯಾಮೆರಾ ಆನ್ ಮಾಡಿದಾಗ ಆ ಕೋಡ್ನ ಬೆಳಕು ಮತ್ತು ಕತ್ತಲೆಯನ್ನು ಗ್ರಹಿಸಿ ಕಪ್ಪು-ಬಿಳಿ ಚುಕ್ಕೆಗಳನ್ನು ‘0’ ಮತ್ತು ‘1’ ಎಂಬ ಡಿಜಿಟಲ್ ಸಂಖ್ಯೆಗಳಾಗಿ ಕನ್ವರ್ಟ್ ಮಾಡುತ್ತೆ. ಆ ‘0’ ಮತ್ತು ‘1’ ಸಂಖ್ಯೆಗಳು ಸೇರಿ ಉದಾಹರಣೆ: upi://pay?pa=shopkeeper@upi&pn=ShopName ಎಂಬ ಲಿಂಕ್ ಆಗಿ ಬದಲಾಗುತ್ತವೆ. ಈ ಲಿಂಕ್ ಓದಿದ ತಕ್ಷಣ, ನಿಮ್ಮ ಬ್ಯಾಂಕ್ ಯುಪಿಐ ಸರ್ವರ್ಗೆ ಸಂಪರ್ಕ ಸಾಧಿಸುತ್ತದೆ. ನೀವು ಅಮೌಂಟ್ ಹಾಕಿ PIN ಒತ್ತಿದ ತಕ್ಷಣ, ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ಕಟ್ ಆಗಿ, ಆ ಕ್ಯೂಆರ್ ಕೋಡ್ಗೆ ಲಿಂಕ್ ಆಗಿರುವ ಅಂಗಡಿಯವನ ಬ್ಯಾಂಕ್ ಅಕೌಂಟ್ಗೆ ಟ್ರಾನ್ಸ್ಫರ್ ಆಗುತ್ತೆ. ಈ ಇಡೀ ಪ್ರಕ್ರಿಯೆ ನಡೆಯಲು ಬೇಕಾಗೋದು ಕೇವಲ 2 ರಿಂದ 3 ಸೆಕೆಂಡುಗಳು.

ಸ್ವಲ್ಪ ಹರಿದಿದ್ರೂ ಸ್ಕ್ಯಾನ್ ಆಗುತ್ತೆ ಹೇಗೆ?
ನೀವು ಎಷ್ಟೋ ಕಡೆ ನೋಡಿರ್ತೀರಾ, ಆ ಕ್ಯೂ-ಆರ್ ಬೋರ್ಡ್ ಮೇಲೆ ನೀರು ಬಿದ್ದು, ಏನಾದ್ರು ಕಲೆ ಹಾಗಿದ್ರೂ, ಸ್ವಲ್ಪ ಹರಿದು ಹೋಗಿದ್ರೂ ಸ್ಕ್ಯಾನ್ ಆಗಿಬಿಡುತ್ತೆ ಹೆಂಗೆ? ಇದನ್ನ ‘Error Correction’ ಅಂತಾರೆ. ಕ್ಯೂ-ಆರ್ ಕೋಡ್ ಡಿಸೈನ್ ಮಾಡಿರೋದೆ ಹಂಗೆ. 30 ರಷ್ಟು ಕೋಡ್ ಡ್ಯಾಮೇಜ್ ಆಗಿದ್ರೂ, ಉಳಿದಿರೋ ಭಾಗದಿಂದಲೇ ಪೂರ್ತಿ ಡೇಟಾನ ಫೋನ್ ಅರ್ಥ ಮಾಡ್ಕೊಳ್ಳುತ್ತೆ. ದುಡ್ಡು ತಲುಪಿದ ತಕ್ಷಣ ಅಂಗಡಿಯಲ್ಲಿದ್ದ ಪೇಟಿಎಂ/ಫೋನ್ ಪೆ ಸೌಂಡ್ಬಾಕ್ಸ್ ಫೋನ್ ಪೇಯಲ್ಲಿ ಇಪ್ಪತ್ತು ರೂಪಾಯಿ ಸ್ವೀಕರಿಸಲಾಗಿದೆ ಅಂತ ಸೌಂಡ್ ಮಾಡುತ್ತೆ.
ಕ್ಯೂಆರ್ ಕೋಡ್ ಸುರಕ್ಷಿತವೇ?
ಕ್ಯೂಆರ್ ಕೋಡ್ ತಂತ್ರಜ್ಞಾನ ನೂರಕ್ಕೆ ನೂರು ಸುರಕ್ಷಿತ. ಆದರೆ, ಮೋಸಗಾರರು ಅಂಗಡಿಗಳ ಮುಂಭಾಗದ ಒರಿಜಿನಲ್ ಕ್ಯೂಆರ್ ಕೋಡ್ ಮೇಲೆ ತಮ್ಮ ನಕಲಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಂಟಿಸುವ ಸಾಧ್ಯತೆ ಇರುತ್ತದೆ.
ನೋಡಿದ್ರಲ್ಲ, ಪ್ರತಿದಿನ ನಾವು ಜಸ್ಟ್ 2 ಸೆಕೆಂಡ್ನಲ್ಲಿ ಮುಗಿಸೋ ಸಣ್ಣ ಪೇಮೆಂಟ್ ಹಿಂದೆ ಇಷ್ಟೊಂದು ಫಿಸಿಕ್ಸ್, ಮ್ಯಾಥ್ಸ್ ಮತ್ತು ಸಾಫ್ಟ್ವೇರ್ ಟೆಕ್ನಾಲಜಿ ಅಡಗಿದೆ. ಮುಂದಿನ ಸಲ ಯಾವುದಾದ್ರೂ ಅಂಗಡಿಯಲ್ಲಿ ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡ್ಬೇಕಾದ್ರೆ, ಈ ಕಪ್ಪು-ಬಿಳುಪು ಡಿಸೈನ್ ಹಿಂದೆ ಎಷ್ಟೊಂದು ಅದ್ಭುತವಾದ ಟೆಕ್ನಾಲಜಿ ಇದೆ ಅಂತ ನೆನಪು ಮಾಡ್ಕೊಳ್ಳಿ



