ಹೊಸದಿಗಂತ ವರದಿ ಬೆಳಗಾವಿ:
ಸ್ಥಳೀಯವಾಗಿ ತಯಾರಾಗುವ ಜವಳಿ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕಲ್ಪಿಸುವ ಮತ್ತು ಉದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ, ಕೈಮಗ್ಗ ಮತ್ತು ಜವಳಿ ಇಲಾಖೆಯ (ಪಶ್ಚಿಮ ವಲಯ) ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಭಾಗೀಯ ಮಟ್ಟದ ಆಂತರಿಕ ಸಲಹಾತ್ಮಕ ಕಾರ್ಯಾಗಾರ ‘ಜಾಗತಿಕ ಮಾರುಕಟ್ಟೆಗೆ ಜವಳಿ’ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು. ಬೆಳಗಾವಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ 7 ಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಹಾಗೂ ನೇಕಾರ ಉದ್ಯಮಿಗಳು ಭಾಗವಹಿಸಿದ್ದರು.
‘ಮೇಡ್ ಇನ್ ಇಂಡಿಯಾ’ ಕ್ರಾಂತಿ ಹಾಗೂ ಬೆಳಗಾವಿಯ ಕೊಡುಗೆ:
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಂಟಿ ನಿರ್ದೇಶಕ ಬೆಳಗಾವಿ ಸತ್ಯನಾರಾಯಣ ಭಟ್, “ಜಾಗತಿಕವಾಗಿ ಯುದ್ಧದಂತಹ ಕಠಿಣ ಪರಿಸ್ಥಿತಿಗಳಿದ್ದರೂ ಭಾರತ ದೇಶವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಈ ಹಿಂದೆ ನಾವು ಚೀನಾ ವಸ್ತುಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೆವು, ಆದರೆ ಇಂದು ‘ಮೇಡ್ ಇನ್ ಇಂಡಿಯಾ’ ಮೇಕ್ ಇನ್ ಇಂಡಿಯಾ ಮೂಲಕ ನಮ್ಮದೇ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಉದ್ಯಮಗಳನ್ನು ಸ್ಥಾಪಿಸುವುದು ಸುಲಭವಲ್ಲ; ಆದರೆ ಅವುಗಳಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತಿದೆ. ಸಾರ್ವಜನಿಕರ ಇಷ್ಟಕ್ಕೆ ತಕ್ಕಂತೆ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವುದು ಮುಖ್ಯ,” ಎಂದರು. ಮುಂದುವರಿದು ಮಾತನಾಡಿದ ಅವರು, “ದೇಶದ ಆಯ್ಕೆಯಾದ 125 ಪ್ರಮುಖ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದಾಗಿದೆ. ಬೆಳಗಾವಿಯ ಶಹಾಪುರದಲ್ಲಿ ನೇಕಾರರು ತಯಾರಿಸುವ ಪ್ರಸಿದ್ಧ ಸೀರೆಗಳಿಗೆ ‘ಜಿಐ’ (Geographical Indication) ಟ್ಯಾಗ್ ಸಿಗಬೇಕಿದೆ. ಸಂಘಟನೆಗಳ ಮೂಲಕ ಗುಣಮಟ್ಟದ ಉತ್ಪನ್ನ ತಯಾರಿಸಿ ವಿದೇಶಿ ಮಾರುಕಟ್ಟೆಗೆ ತಲುಪಿಸಬೇಕು. ನೇಕಾರರು ಇಲಾಖೆಯ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು,” ಎಂದು ಕರೆ ನೀಡಿದರು.
ತರಬೇತಿ ಹಾಗೂ ಸರ್ಕಾರದ ಸಬ್ಸಿಡಿ ಸೌಲಭ್ಯ:
ಧಾರವಾಡ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡಿ, “ಕೈಮಗ್ಗ ಉದ್ಯೋಗಿಗಳಿಗೆ ಜವಳಿ ಇಲಾಖೆಯಿಂದ 7 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಳಿ ಉದ್ಯಮ ಸ್ಥಾಪನೆಗೆ ಹೆಚ್ಚಿನ ಸಬ್ಸಿಡಿ ಮತ್ತು ಪ್ರೋತ್ಸಾಹ ನೀಡುತ್ತಿದ್ದು, ನೇಕಾರರು ಇದರ ಲಾಭ ಪಡೆದುಕೊಳ್ಳಬೇಕು,” ಎಂದು ತಿಳಿಸಿದರು.
ರೇಷ್ಮೆ ಪರಂಪರೆ ಮತ್ತು ಜಾಗತಿಕ ಗುರುತು:
ಇನ್ನೊಬ್ಬರು ಮುಖ್ಯ ಅತಿಥಿ ಶಿವರಾಜ ಆರ್. ಕುಲಕರ್ಣಿ ಮಾತನಾಡಿ, “ಪ್ರಾಚೀನ ಕಾಲದಲ್ಲೇ ನಮ್ಮ ರೇಷ್ಮೆ ತಯಾರಿಕೆ ಕಂಡು ವಿದೇಶಿಯರು ಭಾರತಕ್ಕೆ ಬಂದಿದ್ದರು. ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಇಂದಿಗೂ ಉನ್ನತ ಮಟ್ಟದ ಜವಳಿ ವಸ್ತುಗಳನ್ನು ತಯಾರಿಸಲಾಗುತ್ತಿದೆ. ನಮ್ಮ ಜವಳಿ ಉದ್ಯಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ನಮ್ಮಲ್ಲಿದೆ. ಬೆಳಗಾವಿಯಲ್ಲಿ ಜವಳಿ ಉದ್ಯಮ ಯಶಸ್ವಿಯಾದರೆ, ಅದು ಇಡೀ ದೇಶಕ್ಕೇ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ತರಲಿದೆ,” ಎಂದರು.
ಈ ವೇಳೆ ಕಾರ್ಯಾಗಾರದಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಉಪ ನಿರ್ದೇಶಕರು, ಹಿರಿಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೈಮಗ್ಗ ನೇಕಾರ ಉದ್ಯೋಗಿಗಳು ಉಪಸ್ಥಿತರಿದ್ದು, ಜವಳಿ ತಯಾರಿಕೆ ಹಾಗೂ ಮಾರುಕಟ್ಟೆ ವಿಸ್ತರಣೆಯ ಕುರಿತು ತಮ್ಮ ವಿಚಾರ-ಸಲಹೆಗಳನ್ನು ಹಂಚಿಕೊಂಡರು.



