September 1, 2026
Tuesday, September 1, 2026
spot_img

ರಾಯರೆಡ್ಡಿಗೆ ಮೂರ‍್ನಾಲ್ಕು ಮದುವೆಗಳ ಆಸೆಯಿದ್ದಂತೆ ಕಾಣಿಸುತ್ತಿದೆ: ಸಿ.ಟಿ. ರವಿ

ಹೊಸದಿಗಂತ ವರದಿ ವಿಜಯನಗರ:

ಇಸ್ಲಾಂನಲ್ಲಿ 2-4 ಮದುವೆಗಳಿಗೆ ಕಾನೂನು ಬದ್ಧ ಅವಕಾಶವಿದೆ. ಮರಣದ ಬಳಿಕವೂ ಸ್ವರ್ಗದಲ್ಲಿ 23 ಜನ ಕನ್ಯೆಯರು ಸಿಗುತ್ತಾರೆ ಎಂದು ಹೇಳಲಾಗುತ್ತದೆ. ಜೀವಂತವಿರುವಾಗ ಮೂರ‍್ನಾಲ್ಕು ಮದುವೆಗಳ ಆಸೆ ಹಾಗೂ ಮರಣದ ನಂತರ ಸಿಗುವ ಕನ್ಯೆಯರ ದುರಾಸೆಯಿಂದ ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠವೆಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಇಸ್ಲಾಂ ಯಾವತ್ತೂ ಶ್ರೇಷ್ಠ ಅನಿಸಿಕೊಳ್ಳುವುದಿಲ್ಲ. ಇಸ್ಲಾಂನಲ್ಲಿ ನಡೆಯುವ ಮಹಿಳೆಯರ ಶೋಷಣೆ, ಬುರ್ಕಾ ಹೇಗೆ ಗುಲಾಮಗಿರಿಯ ಸಂಕೇತ, ಭೋಗದ ವಸ್ತುವನ್ನಾಗಿ ನೋಡುವ ಪರಿಯನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಬರೆದ ಥಾಟ್ಸ್ ಆಫ್ ಪಾಕಿಸ್ತಾನ ಪುಸ್ತಕದಲ್ಲಿ ಎಳೆಎಳೆಯಾಗಿ ಉಲ್ಲೇಖಿಸಿದ್ದಾರೆ. ಜಾಗತಿಕ ಭಯೋತ್ಪಾದನೆಯ ಪಟ್ಟಿಯಲ್ಲಿ ಇಸ್ಲಾಂ ಮೊದಲ ಸ್ಥಾನದಲ್ಲಿದೆ. ಬಹುಶಃ ತಮ್ಮ ಜೀವದ ಮೇಲಿನ ಪ್ರೀತಿಯಿಂದ ಇಸ್ಲಾಂ ಶ್ರೇಷ್ಠ ಎನ್ನುವ ಬಸವರಾಜ ರಾಯರೆಡ್ಡಿ ಹಾಗೂ ಹಿಂದೂ ಮಹಿಳೆಯರು ಪರಾವಲಂಭಿಗಳು ಎನ್ನುವ ರಾಹುಲ್ ಗಾಂಧಿ ಅವರು ಡಾ.ಅಂಬೇಡ್ಕರ್ ಪುಸ್ತಕವನ್ನು ಓದಬೇಕು. ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.

ಹಿಂದೂ ಲಿಂಗಾಯತ ಎಂದು ಹೇಳಿಕೊಂಡು ಶಾಸಕರಾಗಿ ಆಯ್ಕೆಗೊಂಡು, ಅದೇ ಕೋಟಾದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಂಡಿರುವ ಬಸವರಾಜ ರಾಯರೆಡ್ಡಿ ಅವರು ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ. ಸನಾತನ ವಿಶ್ವದ ಏಕೈಕ ಧರ್ಮ. ಸನಾತನವನ್ನು ಯಾರೂ ಸ್ಥಾಪಿಸಿಲ್ಲ. ಆದರೆ, ಇನ್ನುಳಿದವೆಲ್ಲವೂ ಮತಗಳು. ಅದನ್ನು ಯಾರೋ ಸ್ಥಾಪಿಸಿರುವಂತದ್ದು. ಮತಗಳಲ್ಲಿ ಪ್ರಶ್ನಿಸುವ ಹಕ್ಕುಗಳಿಲ್ಲ. ಧರ್ಮದಲ್ಲಿ ಮಾತ್ರ ಪ್ರಶ್ನಿಸುವ ಮುಕ್ತ ಸ್ವಾತಂತ್ರ್ಯ ಕಲ್ಪಿಸುತ್ತದೆ. ಸನಾತನ ನಾಶ ಮಾಡಲು ಯತ್ನಿಸಿದವರೆಲ್ಲ ನಾಶವಾಗಿದ್ದಾರೆ. ಸನಾತನ ಧರ್ಮಕ್ಕೆ ಅಂತ್ಯವೇ ಇಲ್ಲ. ಇಂತಹ ಧರ್ಮದಲ್ಲಿ ಜನಿಸಿದ್ದಕ್ಕೆ ಹೆಮ್ಮೆಯಿರಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಒಪ್ಪಿಸಿ ಮೋರ್ಚಾದ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ವಿಭಾಗದ ಸಹಪ್ರಭಾರಿ ಚನ್ನಬಸವನಗೌಡ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮಧುಸೂದನ್ ಜಿಂಕಾಡೆ, ನಾಗರಾಜ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !