ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು, ಸರ್ಕಾರದ ಆಡಳಿತ ಮಾಡಲು ವಿಫಲವಾಗಿದೆ ಎಂದು ಬಿಜೆಪಿ ಆರೋಪ ಮಾಡಿದ್ದು, ಇಂದಿನಿಂದ ಬೃಹತ್ ಪಾದಯಾತ್ರೆಯೊಂದನ್ನು ಆರಂಭಿಸಿದೆ.
ಇಂದಿನಿಂದ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಲಿದ್ದು,ಲಿಂಗಸೂರಿನಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರು ನಡೆಯಲಿದ್ದಾರೆ. ಲಿಂಗಸೂಗೂರು-ಬೆಂಗಳೂರು ಬೈಪಾಸ್ ರಸ್ತೆ ಬಳಿ ಇರುವ ಜೆಕೆ ರೆಸಿಡೆನ್ಸಿಯ ಮುಂಭಾಗದ ಮೈದಾನದಲ್ಲಿ ಬೆಳಗ್ಗೆ 10:30ಕ್ಕೆ ಬಳ್ಳಾರಿ ಚಲೋ ಪಾದಯಾತ್ರೆಗೆ ಚಾಲನೆ ಸಿಗಲಿದೆ.
ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ನಾಯಕರ ಆಗಮನ

ಲಿಂಗಸುಗೂರಿನಿಂದ ಬಳ್ಳಾರಿಯವರೆಗೆ ಭಾರತೀಯ ಜನತಾಪಕ್ಷ ಕೈಗೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ, ವಿ.ಪ ಛಲವಾದಿ ನಾರಾಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಕರು ಆಗಮಿಸಿದ್ದಾರೆ. ಕಾರ್ಯಕ್ರಮದ ಮುಖ್ಯವೇದಿಕೆ ಸಿದ್ಧವಾಗಿದೆ, ಕಾರ್ಯಕರ್ತರು ಕುಳಿತುಕೊಳ್ಳುವುದಕ್ಕೆ ಸಾವಿರ ಸಂಖ್ಯೆಯಲ್ಲಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಘಟಾನುಘಟಿಗಳು ಭಾಗಿ
ಈ ಬಾರಿ ಪಾದಯಾತ್ರೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಭಾಗಿಯಾಗುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ , ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ , ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ , ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್ ರೆಡ್ಡಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜಿ.ಜನಾರ್ದನ ರೆಡ್ಡಿ, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಾಸಕರಾದ ಮಾನಪ್ಪ ವಜ್ಜಲ್, ಡಾ.ಎಸ್.ಶಿವರಾಜ್ ಪಾಟೀಲ್, ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಎಂಎಲ್ಸಿಗಳು ರಾಜ್ಯ ಪದಾಧಿಕಾರಿಗಳು, ಜಿಲ್ಲಾಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಹೋರಾಟದ ಅಜೆಂಡಾ ಏನು? ಬಿಜೆಪಿ ದೂರುಗಳೇನು?
ಕಾಂಗ್ರೆಸ್ ಸರ್ಕಾರ ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಎಸ್‌ಸಿಎಸ್‌ಟಿಗೆ ಹೆಚ್ಚಿಸಿದ್ದ ಮೀಸಲು ಪ್ರಮಾಣ ಕಡಿಮೆ ಮಾಡಿದ್ದಾರೆ. ತುಂಗಭದ್ರಾ ಡ್ಯಾಮ್‌ನ ಹೂಳು ತೆರವುಗೊಳಿಸಿಲ್ಲ, ನವಲಿ ಸಮಾನಾಂತರ ಜಲಾಶಯ ನಿರ್ಮಾಣವಾಗಿಲ್ಲ, ಗೃಹಲಕ್ಷ್ಮೀ ಹಣ ಖಾತೆಗೆ ಬಿದ್ದಿಲ್ಲ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನದಂಥ ಪಿಂಚಣಿಗಳ ಸ್ಥಗಿತವಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾಗೇಂದ್ರ ರಾಜೀನಾಮೆಗಾಗಿ ಪಾದಯಾತ್ರೆ
ಈ ಹಿಂದೆ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿದಾಗ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಮಾಡುವುದಾಗಿ ಹೇಳಿತ್ತು. ಆದರೆ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಆದರೂ ಪಾದಯಾತ್ರೆಯಿಂದ ಹಿಂದೆ ಸರಿಯದ ಬಿಜೆಪಿ ಸರ್ಕಾರದ ವೈಫಲ್ಯ, ದುರಾಡಳಿತ ಹಾಗೂ ದಲಿತ ವಿರೋಧಿ ಧೋರಣೆ ವಿರುದ್ಧ ಹೋರಾಡುವುದಾಗಿ ತಿಳಿಸಿದೆ.
ವಿನಾಕಾರಣ ಹೋರಾಟ ಮಾಡ್ತಿದ್ದಾರೆ: ಕಾಂಗ್ರೆಸ್
ಬಿಜೆಪಿ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿತ್ತು. ಆದರೆ ಇದೀಗ ಅವರು ರಾಜೀನಾಮೆ ಕೊಟ್ಟಿದ್ದಾಗಿದೆ. ಮತ್ತೂ ಯಾಕೆ ಪಾದಯಾತ್ರೆ ಮಾಡಬೇಕು? ಇದು ಅನಾವಶ್ಯಕ ಅಲ್ವಾ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಬಿಜೆಪಿಗೆ ಕೌಂಟರ್ ಕೊಡಲು ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ.



