ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆಯೇ ಒಮ್ಮೆ ಸೆಲ್ಫಿ ವಿಡಿಯೋ ಮಾಡಿ ಜೆನ್ಝಿಗಳ ಗಮನ ಸೆಳೆದಿದ್ದ ಪ್ರಧಾನಿ ಮೋದಿ ಮತ್ತೊಮ್ಮೆ ಸೆಲ್ಫಿ ವಿಡಿಯೋವೊಂದನ್ನು ಮಾಡಿದ್ದಾರೆ. ಭಾರತವು ಶೇ.7.8ರ ಆರ್ಥಿಕ ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಈ ಸಾಧನೆಯಿಂದ ದೇಶವೇ ಸಂತಸದಿಂದ ತುಂಬಿದೆ ಎಂದು ಹೇಳಿದ್ದಾರೆ.
ದೇಶವಾಸಿಗಳ ಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ. ಜಗತ್ತು ಸಂಘರ್ಷಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ಬೆಳವಣಿಗೆ ಸಾಧಿಸಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಹಲವು ಸಲಹೆಗಳನ್ನು ಪ್ರಧಾನಿ ಮೋದಿ ನೀಡಿದ್ದಾರೆ.
ಸಲಹೆಗಳೇನು?
ಎಲ್ಲ ರೀತಿಯ ಅಡೆತಡೆಗಳನ್ನು ಮೀರಿ ನಮ್ಮ ದೇಶ ಶೇ.7.8ರ ಬೆಳವಣಿಗೆ ಸಾಧಿಸಿದೆ. ಈ ವೇಗವನ್ನು ಹೆಚ್ಚುಮಾಡುವ ಕಡೆ ನಮ್ಮ ಗಮನ ಇರಬೇಕು. ಆತ್ಮನಿರ್ಭರ ಭಾರತದಕ್ಕೆ ಸ್ವದೇಶಿ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡಬೇಕು. ಇನ್ನು ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸ ಹೋಗುವುದನ್ನು ನಿಲ್ಲಿಸಿ. ಇನ್ನು ವಿದೇಶಗಳಲ್ಲಿ ಮದುವೆ ಮಾಡಿಕೊಳ್ಳುವುದು ಟ್ರೆಂಡ್ ಆಗಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಪ್ರತೀ ಹೆಜ್ಜೆ ಮುಂದಕ್ಕೆ ಇಡುವಾಗಲೂ ಮೇಡ್ ಇನ್ ಇಂಡಿಯಾ ಎಂದು ಮನಸ್ಸಿನಲ್ಲಿ ಅಂದುಕೊಳ್ಳಿ. ಚಿನ್ನ ಖರೀದಿ ಮಾಡುವಾಗಲೂ ಅಗತ್ಯವಿದ್ದರೆ ಮಾತ್ರ ಖರೀದಿ ಮಾಡಿ ಎಂದು ಹೇಳಿದ್ದಾರೆ.
ನಾವು ಸ್ವದೇಶಿಗೆ ಎಷ್ಟು ಹೆಚ್ಚು ಒತ್ತು ನೀಡುತ್ತೇವೆಯೋ, ಅಷ್ಟೇ ಹೆಚ್ಚು ಆತ್ಮನಿರ್ಭರತೆಗೆ ಒತ್ತು ನೀಡುತ್ತೇವೆ. ಭಾರತದ ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ವೇಳೆಗೆ ನಮ್ಮ ಯುವ ಪೀಳಿಗೆಗೆ ವಿಕಸಿತ ಭಾರತವನ್ನು ಉಡುಗೊರೆಯಾಗಿ ನೀಡುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಇಂದು ನಮ್ಮ ಪರಿಶ್ರಮದ ಮೂಲಕ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುತ್ತೇವೆ ಎಂದಿದ್ದಾರೆ.
ಭಾರತದೊಳಗೇ ಕೆಲವರಿಗೆ ನಿರಾಸೆ
ಕೆಲವರು ಭಾರತದೊಳಗೇ ಇದ್ದು ನಿರಾಸೆಯಲ್ಲಿ ಮುಳುಗಿ, ಸುಳ್ಳು ಹೇಳುತ್ತಾರೆ. ನಕಾರಾತ್ಮಕತೆ ಹರಡುತ್ತಾರೆ. ಇಂಥ ವಿಷಯಗಳಿಗೆ ಕಿವಿ ಕೊಡಬೇಕು ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



