September 3, 2026
Thursday, September 3, 2026
spot_img

RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಬಿಗ್ ರಿಲೀಫ್: ಅಮಾನತು ಆದೇಶಕ್ಕೆ KAT ತಡೆ

ಹೊಸದಿಗಂತ ವರದಿ ಯಾದಗಿರಿ:

ಆರ್.ಎಸ್.ಎಸ್. ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅಮಾನತ್ತುಗೊಳಿಸಿದ್ದ ಆದೇಶಕ್ಕೆ ಕಲಬುರಗಿ ಕೆಎಟಿ ಗುರುವಾರ ತಡೆಯಾಜ್ಞೆ ನೀಡಿದೆ.

ಕಳೆದ 2025ರ ಅಕ್ಟೋಬರ್ 10 ರಂದು ಜರುಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನದಲ್ಲಿ ಜಿಲ್ಲೆಯ ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಗುರುರಾಜ ಜೋಶಿ ಹಾಗೂ ಕುಪ್ಪಿ ಶಾಲೆಯ ಶಿಕ್ಷಕ ಅಣ್ಣಾ ಸಾಹೇಬ ದೇಶಮುಖ ಗಣಾವೇಶ ಧರಿಸಿ ಪಾಲ್ಗೊಂಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಲಾ ಸಾಕ್ಷರತಾ ಇಲಾಖೆ ಡಿಡಿ ಚನ್ನಬಸ್ಸಪ್ಪ ಮುಧೋಳ ಕಳೆದ ಆಗಸ್ಟ್ 20 ರಂದು ಇಬ್ಬರು ಶಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದರು. ಇದು ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿದ್ದಲ್ಲದೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಅಮಾನತ್ತು ಆದೇಶ ಪ್ರಶ್ನಿಸಿದ್ದ ಇಬ್ಬರು ಶಿಕ್ಷಕರು, ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಕಲಬುರಗಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಪೀಠ, ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದು, ಸದ್ಯ ಇಬ್ಬರು ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !