September 3, 2026
Thursday, September 3, 2026
spot_img

‘ನನಗೆ ಕಾಯಬೇಡ’: ಜೈಲಿನಿಂದಲೇ ಪತ್ನಿಗೆ ಡಿವೋರ್ಸ್ ನೀಡಿದ ಯಾಸಿನ್ ಮಲಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶ್ಮೀರಿ ಪಂಡಿತ ನರ್ಸ್‌ ಸರ್ಲಾ ಭಟ್‌ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್ ಮಲಿಕ್, ತನ್ನ ಪಾಕಿಸ್ತಾನಿ ಪತ್ನಿ ಮುಷಾಲ್ ಹುಸೇನ್ ಮಲಿಕ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

1990ರ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿರುವ 25 ಪುಟಗಳ ವೈಯಕ್ತಿಕ ಅಫಿಡವಿಟ್‌ನಲ್ಲಿ ಅವರು ಈ ನಿರ್ಧಾರವನ್ನು ತಿಳಿಸಿದ್ದಾರೆ.

ನನಗಾಗಿ ಕಾಯೋದು ಬೇಡ

ತಮ್ಮ ಪತ್ನಿ ಜೀವನದ ಉಳಿದ ಭಾಗವನ್ನು ತಮ್ಮನ್ನು ಕಾಯುತ್ತಾ ಅಥವಾ ತಮ್ಮ ಪರಿಸ್ಥಿತಿಯ ಬಗ್ಗೆ ಅನಿಶ್ಚಿತತೆಯಲ್ಲಿ ಕಳೆಯುವುದು ತಮಗೆ ಇಷ್ಟವಿಲ್ಲ ಎಂದು ಮಲಿಕ್ ಹೇಳಿದ್ದಾರೆ. ಹೀಗಾಗಿ, ಪತ್ನಿ ತನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು ಎಂಬ ಉದ್ದೇಶದಿಂದ ಗೌರವದಿಂದಲೇ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ಪತ್ನಿಯ ಧ್ವನಿಯನ್ನೂ ಕೇಳಿಲ್ಲ

ತಮ್ಮ ತಾಯಿ, ಪತ್ನಿ ಹಾಗೂ 13 ವರ್ಷದ ಮಗಳು ರಜಿಯಾ ಸುಲ್ತಾನ ಅವರನ್ನು ಉದ್ದೇಶಿಸಿ ಬರೆದಿರುವ ಹೇಳಿಕೆಯಲ್ಲಿ, ದೀರ್ಘಕಾಲದಿಂದ ಕುಟುಂಬದಿಂದ ದೂರವಿರುವ ನೋವನ್ನು ಮಲಿಕ್ ಉಲ್ಲೇಖಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪತ್ನಿಯ ಧ್ವನಿಯನ್ನೂ ಕೇಳಿಲ್ಲ ಎಂದು ಅವರು ಹೇಳಿಕೊಂಡಿದ್ದು, ಜೈಲಿನಲ್ಲಿರುವ ಕಾರಣ ಕುಟುಂಬದೊಂದಿಗೆ ನಿಯಮಿತ ದೂರವಾಣಿ ಅಥವಾ ವಿಡಿಯೋ ಸಂವಹನ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

ಗಲ್ಲು ಶಿಕ್ಷೆ ನೀಡಿ

ಇದೇ ವೇಳೆ, ಸರಳಾ ಭಟ್ ಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂದು ಮಲಿಕ್ ತಿಳಿಸಿದ್ದು, ತಮಗೆ ಗಲ್ಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. 1990ರಲ್ಲಿ ಸರಳಾ ಭಟ್ ಅವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಪ್ರಮುಖ ಆರೋಪಿಯಾಗಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !