September 28, 2026
Monday, September 28, 2026
spot_img

ಹಾರಾಟದ ಮಧ್ಯೆ ಎಮರ್ಜನ್ಸಿ: ದೋಹಾ-ಬೆಂಗಳೂರು ಇಂಡಿಗೋ ವಿಮಾನ ಮಸ್ಕತ್‌ ನಲ್ಲಿ ತುರ್ತು ಲ್ಯಾಂಡಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ.

ವಿಮಾನ ಹಾರಾಟದ ಮಧ್ಯೆ ಪೈಲೆಟ್ ಒಬ್ಬರು ದಿಢೀರ್ ಅಸ್ವಸ್ಥಗೊಂಡಿದ್ದು, ತಕ್ಷಣವೇ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ.

ಪೈಲಟ್ ಗೆ ಹಠಾತ್ ಅನಾರೋಗ್ಯ

ಇಂಡಿಗೋ 6E 1302 ವಿಮಾನ ದೋಹಾ ವಿಮಾನ ನಿಲ್ದಾಣದಿಂದ ಟೇಕ್‌ಆಫ್‌ ಆಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ವೇಳೆ ಪೈಲಟ್-ಇನ್-ಕಮಾಂಡ್‌ಗೆ ಹಠಾತ್ ಅನಾರೋಗ್ಯ ಉಂಟಾಗಿದೆ. ಅವರಿಗೆ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿದ್ದ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.

ಬಳಿಕ ಪೈಲೆಟ್ ಗೆ ಅಲ್ಲೇ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಯಾಣಕ್ಕೂ ವ್ಯತ್ಯಯ ಉಂಟಾಗಿದ್ದು ಪ್ರಯಾಣಿಕರನ್ನು ಬೆಂಗಳೂರಿಗೆ ಸುರಕ್ಷಿತವಾಗಿ ಕಳುಹಿಸಲು ಇಂಡಿಗೋ ಸಂಸ್ಥೆ ಪರ್ಯಾಯ ವಿಮಾನ ಹಾಗೂ ಬದಲಿ ಸಿಬ್ಬಂದಿಯ ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ಉಪಹಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ಘಟನೆ ಕುರಿತು ಮಾಹಿತಿ ನೀಡಿರುವ ಇಂಡಿಗೋ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದೆ. ಅನಿರೀಕ್ಷಿತ ಪರಿಸ್ಥಿತಿಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

Must Read