September 4, 2026
Friday, September 4, 2026
spot_img

ʼಲಾಲ್‌ಬಾಗ್‌ನಲ್ಲೇ ಟನಲ್‌ ಮಾಡಬೇಕು ಅಂತಿರಲಿಲ್ಲ, ಬೇರೆ ಜಾಗ ಅಂದ್ಕೊಂಡಿದ್ವಿ ಆದರೆ..ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲಾಲ್​​ಬಾಗ್ ಬಳಿ ಟನಲ್ ಮಾಡಬೇಕು ಅಂತ ಏನಿಲ್ಲ, ತೊಂದರೆ ಕೊಡಬೇಕು ಅಂತ ಏನಿಲ್ಲ. ಬೇರೆ ಜಾಗದಲ್ಲೂ ಮಾಡಬೇಕು ಎಂಬ ಆಲೋಚನೆ ಇತ್ತು ಆದರೆ ಕೆಲವು ಕಾರಣಗಳಿಂದ ಆ ಕೆಲಸ ಆಗಲಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಉದ್ಯಾನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ ಹಿಂಪಡೆದಿರುವ ವಿಚಾರವಾಗಿ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಅಭಿವೃದ್ಧಿ ವಿರೋಧಿಗಳು ಬಿಜೆಪಿ. ಬೆಂಗಳೂರಿಗೆ ಏನಾದರೂ ಶಾಪ ಇದ್ರೆ ಅದಕ್ಕೆ ಕಾರಣ ಬಿಜೆಪಿ. ಅವರು ಬೆಂಗಳೂರಿಗೆ ಅಂತ ಏನಾದರೂ ಮಾಡಿದ್ದಾರಾ? ಒಂದು ಯೋಜನೆ ಮಾಡಿದ್ದಾರಾ? ಆರ್.ಅಶೋಕ್, ಹೆಚ್ ಡಿ.ಕುಮಾರಸ್ವಾಮಿ, ವಿಜಯೇಂದ್ರ ಉಪಯೋಗಿಸೋ ಪದ, ನಾನು ಉಪಯೋಗಿಸೋಕೆ ಇಷ್ಟಪಡಲ್ಲ. ನಾನು ಈ ಸ್ಥಾನದಲ್ಲಿದ್ದೇನೆ. ಮುಖ್ಯಮಂತ್ರಿ ಸ್ಥಾನ ಇದೆ. ಈ ಸ್ಥಾನಕ್ಕೆ ಗೌರವ ನೀಡಬೇಕು. ನಾನು ನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ. ನಾಲಗೆ ಮೇಲೆ ಹತೋಟಿ ಇಟ್ಟುಕೊಳ್ಳಿ. ನೀವು ಈ ಸ್ಥಾನದಲ್ಲಿ ಇದ್ದವರು, ನಿಮ್ಮ ತಂದೆ ಅವರು ಈ ಸ್ಥಾನದಲ್ಲಿ ಇದ್ದವರು ಎಂದು ವಾಗ್ದಾಳಿ ನಡೆಸಿದರು.

ಮಸೂದೆ ವಿಚಾರವಾಗಿ ಯೂಟರ್ನ್ ಶಿವಕುಮಾರ್ ಅಂತ ಏನೇನೋ ಹೇಳಿದ್ದಾರೆ. ನಾನು ಯಾಕೆ ಯೂಟರ್ನ್ ಆಗಲಿ. ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿಲ್ಲ. ಹಿಂದೆ ಮಾಜಿ ಸಿಎಂ ಕಾಲದಲ್ಲಿ ಏನೇನು ಆಗಿದೆ ಅಂತ ಪಟ್ಟಿ ಬಿಡುಗಡೆ ಮಾಡುತ್ತೇನೆ. ನಾನು ಚರ್ಚೆ ಆಗಲಿ ಅಂತ ಇದ್ದೆ. ಪಾರ್ಕ್ ವಿಚಾರ ದಲ್ಲಿ ಚರ್ಚೆ ಮಾಡಬೇಕಿತ್ತು. ಯಾರಾದರೂ ಪಾರ್ಕ್ ಮಾರೋಕೆ ಆಗುತ್ತಾ? ನನಗೆ ದೇವರು ಜ್ಞಾನ ಕೊಟ್ಟಿದ್ದಾರೆ. ಬೇಸಿಕ್ ಕಾಮನ್ ಸೆನ್ಸ್ ಇದೆ. ನೀವು ಏನೇನು ಮಾಡಿದ್ದೀರಿ? ಜೆಪಿ ಪಾರ್ಕ್, ಅಲ್ಲಿ ಇಲ್ಲಿ ಏನಾಗಿದೆ ಗೊತ್ತು, ಬಿಡುಗಡೆ ಮಾಡುತ್ತೇವೆ. ನನ್ನನ್ನ ಸುಮ್ಮನೆ ಕೆಣಕೋಕೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು.

ಅಧಿಕಾರ ಇಲ್ಲದೇ ಇದ್ದಾಗ ಎಲ್ಲಾ ದಾಖಲೆ ಇದ್ವು. ಈಗ ಸುಮ್ಮನೇ ಯಾಕೆ ಈ ಚರ್ಚೆ. ಚರ್ಚೆ ಮಾಡಬೇಕು ಎಂದು ಬಿಲ್ ವಾಪಸ್ ಪಡೆದಿದ್ದೇವೆ. ಅವಶ್ಯಕತೆ ಇದ್ದಾಗ ಮರಳಿ ಪಡೆಯಬೇಕಾಗುತ್ತದೆ. ಎಲ್​​ಹೆಚ್ ಸರ್ಕಾರದ ಜಾಗ, ಪ್ರೆಸ್ ನವರಿಗೆ ಜಾಗ ಕೊಟ್ಟಿದ್ದು ಕಬ್ಬನ್ ಪಾರ್ಕ್ ಜಾಗ. ಒಂದೊಂದು ಕಾಲಕ್ಕೆ ಒಂದೊಂದು ನಿರ್ಣಯ ಆಗಿದೆ. ಅದಕ್ಕೆ ನಾನು ಹೆದರಿದ್ದೇನೆ. ಯೂಟರ್ನ್ ಆಗಿದೆ ಅಂತಾರೆ. ನೀವೂ ಕೆಲವೊಂದಿಷ್ಟು ಸಲಹೆ ಕೊಡುತ್ತೀರಿ, ಅದನ್ನು ನಾವು ತೆಗೆದುಕೊಳ್ಳುತ್ತೇವೆ, ಅದನ್ನು ಯೂಟರ್ನ್ ಅನ್ನೋಕೆ ಆಗುತ್ತಾ ಎಂದರು.

ಪಾರ್ಕ್ ವಿಧೇಯಕ ವಿಷಯದಲ್ಲಿ ಸರ್ಕಾರದ ಅವಸರದ ನಡೆ ಆಯ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವಸರ ಅಂತ ಏನಿಲ್ಲ. ಈ ಹಿಂದೆ ಎಲ್ಲಾ ಸ್ಪೆಷಲ್ ಆರ್ಡರ್ ಮಾಡಿದ್ದಾರೆ. ಇದನ್ನು ಟನಲ್ ಗಾಗಿ ಮಾಡುತ್ತಿದ್ದಾರೆ ಅಂತಾರೆ. ಆಯ್ತು ಮಹಾರಾಷ್ಟ್ರ ಸೇರಿ ಹಲವು ಕಡೆ ಟನಲ್ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸೋಕೆ ಆಗುತ್ತಾ?. ಡಬಲ್ ಡೆಕ್ಕರ್ ಬಗ್ಗೆಯೂ ಮಾತಾಡುತ್ತಾರೆ. ಟ್ರಾಫಿಕ್ ಕಡಿಮೆ ಮಾಡಬೇಕು ಅಂತ ಕ್ರಮ ತೆಗೆದುಕೊಂಡಿದ್ದೆವು. ನಾವು ತಪ್ಪಿಗೆ ತಗಲಾಕಿ ಕೊಳ್ಳುತ್ತೇವೆ ಎಂದು ಅಧಿವೇಶನ ದಲ್ಲಿ ಚರ್ಚೆ ಮಾಡಲಿಲ್ಲ ಅವರು ಎಂದು ಕಿಡಿಕಾರಿದರು.

ನಮ್ಮ ಊರಲ್ಲಿ ಬರದ ಬಗ್ಗೆ ಚರ್ಚೆ ಮಾಡೋಕೆ ಅಂತ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಕೇಳಿಕೊಂಡಿದ್ದಾರೆ. ಅದಕ್ಕಾಗಿ ನಾವು ವಿಶೇಷ ಅಧಿವೇಶನ ಕರೆದಿದ್ದೇವೆ. ಎಷ್ಟು ಸಾವಿರ ಹಳ್ಳಿಗಳಿಗೆ ಎಫೆಕ್ಟ್ ಆಗುತ್ತಿದೆ ಎಂದು ಚರ್ಚೆ ಮಾಡುತ್ತಿದ್ದೇವೆ. ಅದಕ್ಕಾಗಿ ಚರ್ಚೆ ಮಾಡೋಕೆ ವಿಶೇಷ ಅಧಿವೇಶನ ಮಾಡುತ್ತಿದ್ದೇವೆ. ನಾವು ಬರದ, ರೈತರ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ನಾವು ವರದಿ ಕೊಡಬೇಕು. ಸಲಹೆ ಇದ್ದರೆ ಕೊಡಲಿ, ನಾನೂ ಸ್ವಾಗತ ಮಾಡುತ್ತೇವೆ. ಈಗ ವಿಸ್ತರಣೆ ಮಾಡಿ ಎಂದು ಹೇಳುತ್ತಿದ್ದಾರೆ, ನೋಡೋಣ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !