ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ ೧೭ ದಿನಗಳ ಬೃಹತ್ ಯುದ್ಧತಾಲೀಮು ನಡೆಸಲು ಸಿದ್ಧವಾಗಿದೆ. ಇದು ಪಾಕಿಸ್ತಾನದ ನಿದ್ದೆಗೆಡಿಸುವಂತಾಗಿದ್ದು, ಎಮರ್ಜೆನ್ಸಿ ಮೀಟಿಂಗ್ ಕರೆಯಲಾಗಿದೆ.
ಈಗಾಗಲೇ ಅಧಿಕೃತ ನೋಟಮ್ ಜಾರಿಯಾಗಿದ್ದು, ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಈ ಭಾರಿ ಮಿಲಿಟರಿ ಕವಾಯತಿನಿಂದ ಗಡಿಯಲ್ಲಿ ಆತಂಕಗೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದಿದ್ದು, ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ.
ಸುಮಾರು 40 ಸಾವಿರ ಅಡಿ ಎತ್ತರದವರೆಗೆ ಈ ವಲಯದಲ್ಲಿ ಯುದ್ಧ ವಿಮಾನಗಳ ಚಲನವಲನಗಳಿಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನು : ಗುರುತಿಸಲಾದ ವಲಯಗಳಲ್ಲಿ ಒಂದು ಭಾಗವು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿದೆ. ಇದು ಪಾಕ್ ಸೇನೆಯನ್ನು ತೀವ್ರ ಚಿಂತೆಗೀಡುಮಾಡಿದೆ. ಭಾರತದ ನೋಟಾಮ್ ಬಿಡುಗಡೆಯಾಗಿದ್ದೇ ತಡ ಪಾಕ್ ರಕ್ಷಣಾ ಪಡೆಗಳ ಮುಖ್ಯಸ್ಥರ ಕಚೇರಿ ಹಾಗೂ ರಕ್ಷಣಾ ಸಚಿವಾಲಯ ತುರ್ತು ಸಮಾಲೋಚನೆ ನಡೆಸಿವೆ.
ಭಾರತದ ಯುದ್ಧ ವಿಮಾನಗಳ ಯಾವುದೇ ಚಲನವಲನಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ತನ್ನ ರೇಡಾರ್ ಕೇಂದ್ರಗಳನ್ನು ಸಕ್ರಿಯಗೊಳಿಸಿದ್ದು, ಗಡಿಯಲ್ಲಿ ಹೆಚ್ಚಿನ ವಾಯು ರಕ್ಷಣಾ ಪಡೆಗಳನ್ನು ನಿಯೋಜಿಸಿದೆ.ಈ 17 ದಿನಗಳ ಯುದ್ಧ ತಾಲೀಮು, ಜೋಧ್‌ಪುರದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 12 ರವರೆಗೆ ನಿಗದಿಯಾಗಿರುವ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ ‘ತರಂಗ್ ಶಕ್ತಿ 2026’ ಜತೆಗೆ ಹೊಂದಿಕೆಯಾಗಲಿದೆ.



