ವಾಟ್ಸಾಪ್ ತೆರೆದ್ರೆ ಸಾವಿರ ಮೆಸೇಜು, ಜಿಮೇಲ್ನಲ್ಲಿ ತಲೆಬಿಸಿ ತರೋ ಆಫೀಸ್ ಮೈಲುಗಳು, ಇನ್ಸ್ಟಾಗ್ರಾಮ್ ನಲ್ಲಂತೂ ದಿನಪೂರ್ತಿ ನೋಟಿಫಿಕೇಶನ್ಗಳ ಕಿರಿಕಿರಿ. ಸೆಕೆಂಡ್ಗೆ ಹತ್ತು ಮೆಸೇಜ್ ಕಳುಹಿಸೋ ಈ ಡಿಜಿಟಲ್ ಕಾಲದಲ್ಲೂ, ಇವತ್ತಿನ Gen Z ಯುವಕ-ಯುವತಿಯರು ಪೋಸ್ಟ್ಮ್ಯಾನ್ಗಾಗಿ ಕಾಯ್ತಿದ್ದಾರೆ ಅಂದ್ರೆ ನೀವು ನಂಬ್ತೀರಾ? ಹೌದು, ಕಿವಿಯಲ್ಲಿ ಬಡ್ಸ್ ಹಾಕೊಂಡು ಸ್ಕ್ರೀನ್ ಮೇಲೆ ಬೆರಳು ಓಡಿಸೋ ಇಂದಿನ ಯುವಪಡೆ, ಈಗ ಹಳೆ ಕಾಲದ ‘ಸ್ನೈಲ್ ಮೇಲ್’ ಪ್ರೇಮಕ್ಕೆ ಬಿದ್ದಿದ್ದಾರೆ!

ಫೋನ್ ನೋಡಿ ನೋಡಿ ಸಾಕಾಗಿದೆ
ಯಾಕೆ ಹೀಗೆ? ಸ್ಮಾರ್ಟ್ಫೋನ್ನಲ್ಲಿ ಎಲ್ಲವೂ ಒಂದೇ ಕ್ಲಿಕ್ನಲ್ಲಿ ಸಿಗೋವಾಗ, ವಾರಗಟ್ಟಲೆ ಕಾಯೋ ಈ ಹಳೆ ಪತ್ರಗಳ ಉಸಾಬರಿ ಇವರಿಗ್ಯಾಕೆ ಬೇಕು ಎಂದು ಅನಿಸಬಹುದು. ಆದರೆ, ನಿಜ ಹೇಳಬೇಕಂದ್ರೆ ಈ ಫಾಸ್ಟ್ ವರ್ಲ್ಡ್ನಲ್ಲಿ ನಮಗೆಲ್ಲ ಸಿಕ್ರೇಟ್ ಆಗಿ ಬೇಕಾಗಿರೋದೇ ಸ್ವಲ್ಪ ‘ಸ್ಲೋ-ಲೈಫ್’. ವಾಟ್ಸಾಪ್ನಲ್ಲಿ ಯಾರೋ ಕಳುಹಿಸೋ ‘ಲವ್ ಯು’ ಮೆಸೇಜ್ಗೆ ಬೆಲೆ ಇಲ್ಲದಂತಾಗಿದೆ. ಬರೆದ ಮರುಕ್ಷಣವೇ ಡಿಲೀಟ್ ಮಾಡಬಹುದು, ಕಾಪಿ-ಪೇಸ್ಟ್ ಮಾಡಬಹುದು. ಆದರೆ, ಕೆಂಪು ಕಲರ್ ಲೆಟರ್ ಬಾಕ್ಸ್ ಒಳಗೆ ಹಾಕಿ, ದೇಶ ಸುತ್ತಿ ಬರೋ ಒಂದು ಪತ್ರದ ಮೌಲ್ಯವೇ ಬೇರೆ.

ಕಾಯೋದ್ರಲ್ಲಿದೆ ಅಸಲಿ ಕಿಕ್!
ವಾಟ್ಸಾಪ್ನಲ್ಲಿ ಮೆಸೇಜ್ ಕಳುಹಿಸಿ, ರಿಪ್ಲೈ ತಕ್ಷಣ ಬರ್ಲಿಲ್ಲ ಅಂದ್ರೆ ಕಿರಿಕಿರಿ ಆಗುತ್ತೆ. ಆದ್ರೆ ಅಂಚೆ ಪತ್ರ ಬರೆಯೋದ್ರಲ್ಲಿ ಆತುರ ಇಲ್ಲ. “ನನ್ನ ಪತ್ರ ಇಷ್ಟೊತ್ತಿಗೆ ಅವರಿಗೆ ತಲುಪಿರಬಹುದು, ಅವರು ಅದನ್ನ ಓದಿ ಖುಷಿ ಪಟ್ಟಿರಬಹುದು, ಇನ್ನೆರಡು ದಿನದಲ್ಲಿ ನನಗೆ ರಿಪ್ಲೈ ಬರಬಹುದು” ಎಂದು ಕಾಯೋ ಆ ಕ್ಷಣಗಳು ಇದೆಯಲ್ಲ… ಆ ‘ವೇಟಿಂಗ್’ ಕೊಡೋ ಖುಷಿ ಯಾವ ಡಿಜಿಟಲ್ ಆಪ್ನಲ್ಲೂ ಸಿಗಲ್ಲ.

ಬರಿ ಕಾಗದ ಅಲ್ಲ, ಅದೊಂದು ನೆನಪು
ಫೋನ್ನಲ್ಲಿರೋ ಮೆಸೇಜ್ಗಳನ್ನು ಒಂದೇ ಕ್ಲಿಕ್ನಲ್ಲಿ ಡಿಲೀಟ್ ಮಾಡಬಹುದು. ಆದ್ರೆ ಪ್ರೀತಿಯಿಂದ ಬರೆದ ಪತ್ರಗಳನ್ನ ಎತ್ತಿಟ್ಟುಕೊಳ್ಬಹುದು. ಕವರ್ ತೆಗೆಯುವಾಗ ಬರೋ ಆ ಕಾಗದದ ಸ್ಮೆಲ್, ಗೆಳೆಯನೋ ಅಥವಾ ಗೆಳತಿಯೋ ಬರೆದ ಆ ಕೈಬರಹ, ಅದರಲ್ಲಿರೋ ಸಣ್ಣಪುಟ್ಟ ಸ್ಪೆಲ್ಲಿಂಗ್ ಮಿಸ್ಟೇಕ್… ಇವೆಲ್ಲವೂ ಆ ಕ್ಷಣವನ್ನು ಜೀವಂತವಾಗಿಡುತ್ತವೆ. ವರ್ಷಗಳ ನಂತರ ಆ ಪತ್ರ ಸಿಕ್ಕಿದ್ರೂ, ಅದನ್ನ ಓದಿದಾಗ ಮನಸ್ಸಿಗೆ ಸಿಗೋ ನೆಮ್ಮದಿ ಬೆಲೆಕಟ್ಟಲಾರದ್ದು.
ಇವತ್ತಿನ ಯುವಜನತೆ ‘ಸ್ಲೋ ಲಿವಿಂಗ್’ ಬದುಕೋದಕ್ಕೆ ಇಷ್ಟಪಡ್ತಿದ್ದಾರೆ. ಇನ್ಸ್ಟೆಂಟ್ ಆನ್ಲೈನ್ ಪ್ರಪಂಚದಿಂದ ಹೊರಬಂದು, ನಿಜವಾದ ಕನೆಕ್ಷನ್ ಹುಡುಕ್ತಿದ್ದಾರೆ. ಇದೇ ಕಾರಣಕ್ಕೆ ಈಗ ಪೋಸ್ಟ್ ಕಾರ್ಡ್ಗಳು, ಪೆನ್ ಫ್ರೆಂಡ್ಗಳು, ಹಳೆ ಕಾಲದ ಸ್ಟಾಂಪ್ಗಳು ಮತ್ತೆ ಟ್ರೆಂಡಿಂಗ್ನಲ್ಲಿವೆ.
ಒಟ್ಟಿನಲ್ಲಿ, “ಓಲ್ಡ್ ಈಸ್ ಗೋಲ್ಡ್” ಅನ್ನೋ ಮಾತು ಬರೀ ಮಾತಿಗಷ್ಟೇ ಅಲ್ಲ, ಇವತ್ತಿನ ಜನರೇಷನ್ನ ಹೊಸ ಲೈಫ್ಸ್ಟೈಲ್ ಆಗಿದೆ. ವಾಟ್ಸಾಪ್ ಬ್ಲೂ ಟಿಕ್ಗಿಂತ, ಪೋಸ್ಟಲ್ ಸ್ಟಾಂಪ್ನ ಕೆಂಪು ಮುದ್ರೆನೇ ಚಂದ ಎಂದು ಜೆನ್ ಝಿ ಪ್ರೂವ್ ಮಾಡ್ತಿದ್ದಾರೆ. ನಿಮಗೂ ಯಾರಾದ್ರೂ ನೆನಪಾದ್ರೆ… ಫೋನ್ ತೆಗೆದು ಮೆಸೇಜ್ ಟೈಪ್ ಮಾಡಬೇಡಿ, ಒಂದು ಪೋಸ್ಟ್ ಕಾರ್ಡ್ ತಗೊಂಡು ಬರೆಯೋಕೆ ಶುರು ಮಾಡಿ!



