ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಬ್ಬದಲ್ಲಿ ಮನೆಯ ತುಂಬ ಹಣತೆ ಹಚ್ಚಿ, ಸಿಹಿ ಅಡುಗೆ ತಯಾರಿಸಿ, ಪೂಜೆ ಮಾಡುವುದರಲ್ಲಿ ಮನೆಮಂದಿಯೆಲ್ಲಾ ನಿರತರಾಗಿದ್ದರೆ ಪುಟಾಣಿ ಮಕ್ಕಳು ನಿಮ್ಮ ಕಣ್ಣು ತಪ್ಪಿಸಿ ಪಟಾಕಿ ಡಬ್ಬಿ ಜೊತೆಗೆ ಹೊರಗೆ ಓಡಿರುತ್ತಾರೆ. ಈ ಬಗ್ಗೆ ಗಮನ ಇರಲಿ. ಬೆಳಕಿನ ಹಬ್ಬದ ಸಮಯದಲ್ಲಿ ಎಲ್ಲೆಡೆ ಮಕ್ಕಳು ಕಣ್ಣಿಗೆ ಸಂಬಂಧಿಸಿದ ಅವಘಡಗಳಿಗೆ ತುತ್ತಾಗುತ್ತಾರೆ. ತಪ್ಪು ಯಾರೇ ಮಾಡಿರಲಿ ನಿಮ್ಮ ಮಕ್ಕಳ ಸುರಕ್ಷತೆ ನಿಮ್ಮ ಕೈಯಲ್ಲಿರುತ್ತದೆ. ಈ ಬಾರಿ ಪಟಾಕಿ ಹೊಡೆಯುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ..
ದೊಡ್ಡವರಿಲ್ಲದೆ ಮಕ್ಕಳು ಪಟಾಕಿ ಹೊಡೆಯುವಂತಿಲ್ಲ. ಈ ನಿಯಮವನ್ನು ಬ್ರೇಕ್ ಮಾಡುವಂತಿಲ್ಲ ಎನ್ನುವುದನ್ನು ಮಕ್ಕಳಿಗೆ ಹೇಳಿಕೊಡಿ. ನಾಲ್ಕೈದು ಮಕ್ಕಳಿದ್ದರೆ ಇಬ್ಬರು ದೊಡ್ಡವರು ಅವರ ಜೊತೆ ಇರುವುದು ಉತ್ತಮವಾಗಿದೆ. ಮಕ್ಕಳ ಪ್ರತೀ ಹೆಜ್ಜೆಯ ಮೇಲೆಯೂ ಕಣ್ಣಿಡಿ. ಒಂದು ಸಣ್ಣ ತಪ್ಪು ಅವರ ಜೀವಕ್ಕೆ ಹಾನಿಯಾಗಬಹುದು.
ಹಸಿರು ಪಟಾಕಿಗಳನ್ನು ಮಾತ್ರ ಮನೆಗೆ ತನ್ನಿ, ಖುಷಿಗೆ ಒಂದೆರಡು ಪಟಾಕಿ ಹೊಡೆದು ಮನೆಯೊಳಕ್ಕೆ ಹೋಗುವುದು ಉತ್ತಮ. ಎಲ್ಲರೂ ಪಟಾಕಿಗಳನ್ನು ಹೊಡೆಯುವ ಕಾರಣ ಗಾಳಿ ವಿಷಪೂರಿತವಾಗಿರುತ್ತದೆ. ಮಕ್ಕಳು ಇದನ್ನು ಸೇವನೆ ಮಾಡುವುದು ಯಾರಿಗೂ ಇಷ್ಟವಿಲ್ಲ. ತಮ್ಮಿಷ್ಟದ ಊಟ, ಸಿನಿಮಾ ಮೂಲಕ ಅವರನ್ನು ಡಿಸ್ಟ್ರಾಕ್ಟ್ ಮಾಡಿ.
ಪಟಾಕಿ ಹೊಡೆಯುವ ಸಮಯದಲ್ಲಿ ಒಂದು ದೊಡ್ಡ ಬಕೆಟ್ನಲ್ಲಿ ನೀರು ತುಂಬಿಸಿ ಹೊರಕ್ಕೆ ಇಡಿ. ಆರಿದ ಪಟಾಕಿಗಳನ್ನು ಅದರೊಳಗೆ ಹಾಕಿ. ಹೀಗೆ ಮಾಡಿದಾಗ ಅರ್ಧಂಬರ್ಧ ಹೊಡೆದು ಬಿದ್ದಿರುವ ಪಟಾಕಿಗಳು ಮತ್ತೆ ಸಿಡಿಯುವ ಸಾಧ್ಯತೆ ಇರುವುದಿಲ್ಲ.
ಇನ್ನು ಪುಟ್ಟ ಕಂದಮ್ಮಗಳಿಗೆ ಸುಲಭವಾಗುವ ಸುರುಸುರು ಬತ್ತಿ ಪಟಾಕಿಯನ್ನು ನೀಡುವಾಗ ಕ್ಯಾರೆಟ್, ಮೂಲಂಗಿ ಈ ರೀತಿ ಉದ್ದನೆಯ ತರಕಾರಿಗೆ ಅದರ ಕೊನೆಯನ್ನು ಚುಚ್ಚಿ. ಮಕ್ಕಳಿಗೆ ತರಕಾರಿಯನ್ನು ಇಟ್ಟುಕೊಂಡು ಪಟಾಕಿ ಆಡಲು ಬಿಡಿ. ಮಕ್ಕಳ ಕೈ ಸುಡುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ.
ಎಲ್ಲರಿಗೂ ಇಷ್ಟವಾಗುವ ಸುರುಸುರು ಬತ್ತಿ, ಹೂವಿನ ಕುಂಡ, ಭೂಚಕ್ರ, ಬಣ್ಣದ ಲೈಟ್ಗಳು ಬರುವ ಪಟಾಕಿಗಳನ್ನು ಮಾತ್ರ ತನ್ನಿ. ದೊಡ್ಡ ದನಿ ಮಾಡುವ ಪಟಾಕಿಗಳಿಂದ ಮಕ್ಕಳ ಕಿವಿಗೆ ತೊಂದರೆಯುಂಟಾಗುತ್ತದೆ. ಕೆಲವು ಮಕ್ಕಳಿಗೆ ಶಾಶ್ವತವಾಗಿ ಶ್ರವಣ ದೋಷ ಬರುವ ಸಾಧ್ಯತೆ ಇದೆ.
ಮಕ್ಕಳಿಗೆ ನೈಲಾನ್ ಅಥವಾ ಪಾಲಿಯಿಸ್ಟರ್ ಬಟ್ಟೆ ಹಾಕಬೇಡಿ. ಹಬ್ಬದ ಆಚರಣೆಯ ನಂತರ ಮೆತ್ತನೆಯ ಕಾಟನ್ ಬಟ್ಟೆ ಹಾಕಿ ಆಡಲು ಬಿಡಿ. ಆಕಸ್ಮಿಕವಾಗಿ ಬೆಂಕಿ ತಗುಲಿದರೆ ಕಾಟನ್ ಬಟ್ಟೆ ಕರಗಿ ಮೈಗೆ ಅಂಟಿಕೊಳ್ಳುವುದಿಲ್ಲ.
ಒಂದು ಬಾರಿ ಒಂದೇ ಪಟಾಕಿ ಹೊಡೆಯಲು ಹೇಳಿ. ಒಂದು ಬಾರಿ ನಾಲ್ಕೈದು ಪಟಾಕಿಗಳನ್ನು ಹೊಡೆದಾಗ ಯಾವುದಾದರೂ ಒಂದು ಬ್ಯಾಕ್ ಫೈರ್ ಆಗುವ ಸಾಧ್ಯತೆ ಇದೆ. ಮಕ್ಕಳ ಗಮನ ಆಚೀಚೆ ಆಗಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.
ಪಟಾಕಿಗೆ ಬೆಂಕಿ ಹಚ್ಚಿ ಕೆಲ ಸಮಯ ಆದರೂ ಅದು ಹೊಡೆಯಲಿಲ್ಲ ಎಂದು ಭಾವಿಸಿ ಅದರ ಬಳಿ ಮುಖ ಇಟ್ಟು ಬಗ್ಗಿ ನೋಡಬೇಡಿ. ಕಿಡಿ ಒಳಗೆ ಇದ್ದರೆ ಯಾವ ಕ್ಷಣದಲ್ಲಿಯಾದರೂ ಪಟಾಕಿ ಢಂ ಎನ್ನಬಹುದು.
ಮನೆಯಲ್ಲಿ ಫಸ್ಟ್ ಏಯ್ಡ್ ಕಿಟ್ ಇರಲಿ. ಒಂದು ಬಕೆಟ್ ನೀರು, ಮಣ್ಣು ಜೊತೆಯಲ್ಲಿಯೇ ಇಟ್ಟುಕೊಳ್ಳಿ. ಸಣ್ಣ ಪುಟ್ಟ ಗಾಯಗಳಾದರೆ ಅದಕ್ಕೆ ಪೇಸ್ಟ್, ಬೆಣ್ಣೆ, ಎಣ್ಣೆ ಹಚ್ಚಬೇಡಿ. ನಲ್ಲಿಯಲ್ಲಿ ಬರುವ ನೀರಿನ ಅಡಿ ಗಾಯವನ್ನು ಇಟ್ಟುಕೊಳ್ಳಿ.
ಎಲ್ಲರಿಗೂ ದೀಪಾವಳಿ ಇಷ್ಟ. ಮಕ್ಕಳಿಗೆ ಪಟಾಕಿಯೆಂದರೆ ಎಲ್ಲಿಲ್ಲದ ಆಸಕ್ತಿ. ಆದರೆ ಮಕ್ಕಳಿಗೆ ಗೊತ್ತಿಲ್ಲದ ವಿಷಯಗಳು ನಿಮಗೆ ಗೊತ್ತಿದೆ. ಅವರು ಗೊತ್ತಿಲ್ಲದೇ ಮಾಡುವ ತಪ್ಪುಗಳು ಅವರ ಜೀವನಕ್ಕೆ ಸಮಸ್ಯೆ ಉಂಟುಮಾಡಬಹುದು. ಹೀಗಾಗಿ ಮಕ್ಕಳ ಮೇಲೆ ನಿಗಾ ಇರಲಿ. ಪ್ರತೀ ಸಮಯದಲ್ಲಿಯೂ ನಿಮ್ಮ ಮಗು ಎಲ್ಲಿದೆ? ಏನು ಮಾಡುತ್ತಿದೆ ಎನ್ನುವ ಬಗ್ಗೆ ಅರಿವಿರಲಿ. ಎಲ್ಲರೂ ಸುರಕ್ಷಿತ ದೀಪಾವಳಿಯನ್ನು ಆಚರಿಸೋಣ



