ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡನೇ ಮಹಾಯುದ್ಧದ ನಂತರದ ಇಟಲಿಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮೆಲೋನಿ ಅವರನ್ನು ತಮ್ಮ ಆಪ್ತ ಸ್ನೇಹಿತೆ ಎಂದು ಹೇಳಿಕೊಂಡಿರುವ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಈ ಅಭೂತಪೂರ್ವ ಸಾಧನೆಯು ಇಟಲಿಯ ಜನತೆಗೆ ಅವರ ನಾಯಕತ್ವದ ಮೇಲಿರುವ ಅಪಾರ ನಂಬಿಕೆ ಮತ್ತು ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಶ್ಲಾಘಿಸಿದ್ದಾರೆ.
ಭಾರತ ಮತ್ತು ಇಟಲಿ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಜಾರ್ಜಿಯಾ ಮೆಲೋನಿ ಅವರ ಸ್ನೇಹ ಹಸ್ತ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಸ್ಮರಿಸಿದ್ದಾರೆ. ಉಭಯ ದೇಶಗಳ ನಾಗರಿಕರ ಉಜ್ವಲ ಹಾಗೂ ಸಮೃದ್ಧ ಭವಿಷ್ಯಕ್ಕಾಗಿ ಈ ಆಪ್ತ ಸಹಯೋಗವನ್ನು ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿಸಲು ತಾವು ಉತ್ಸುಕರಾಗಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಧಾನಿ ಮೆಲೋನಿ ಅವರ ಮುಂಬರುವ ಅಧಿಕಾರಾವಧಿ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿರುವ ಮೋದಿ, ಭವಿಷ್ಯದ ವರ್ಷಗಳಲ್ಲಿ ಅವರ ನಾಯಕತ್ವದಲ್ಲಿ ಇಟಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಭಾರತ ಮತ್ತು ಇಟಲಿ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳು ವೃದ್ಧಿಸುತ್ತಿರುವುದಕ್ಕೆ ಈ ಸಂದೇಶ ಮತ್ತೊಂದು ಸಾಕ್ಷಿಯಾಗಿದೆ.
ಇದನ್ನೂ ಓದಿ:
ಮೆಲೋನಿಯ ಐತಿಹಾಸಿಕ ಸಾಧನೆ:
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಕನ್ಸರ್ವೇಟಿವ್ ಸರ್ಕಾರವು ಸತತ 1,413 ದಿನಗಳ ತಮ್ಮ ಅಧಿಕಾರ ಪೂರೈಸುವ ಮೂಲಕ ಎರಡನೇ ಮಹಾಯುದ್ಧದ ನಂತರದ ಇಟಲಿ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಸರ್ಕಾರ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಮೂಲಕ ಅವರು ಈ ಹಿಂದೆ ಸಿಲ್ವಿಯೋ ಬೆರ್ಲುಸ್ಕೋನಿ (2001-2005) ಸ್ಥಾಪಿಸಿದ್ದ ಸುದೀರ್ಘ ಆಡಳಿತದ ದಾಖಲೆಯನ್ನು ಮುರಿದಿದ್ದಾರೆ. ಹಾಗೆಯೇ ಅಕ್ಟೋಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡಾಗ, ಮೆಲೋನಿ ಇಟಲಿಯ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಐತಿಹಾಸಿಕ ಕ್ಷಣವನ್ನು ಜಾರ್ಜಿಯಾ ಮೆಲೋನಿಯ ಬ್ರದರ್ಸ್ ಆಫ್ ಇಟಲಿ ಪಕ್ಷವು ಬಾರಿಯಲ್ಲಿ ಇಂದು ಶುಕ್ರವಾರ ಬೃಹತ್ ರಾಜಕೀಯ ಸಮಾವೇಶದ ಮೂಲಕ ಆಚರಿಸಲು ಸಜ್ಜಾಗಿದ್ದಾರೆ.



