ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಚಿನ್ನದ ಗಣಿ ಸಿಕ್ಕಿದೆ. ಗಡಿಯೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ 14 ಚಿನ್ನದ ನಾಣ್ಯಗಳು ಸಿಕ್ಕಿವೆ. ಇಲ್ಲಿನ ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಇವು ಒಟ್ಟಾರೆ 54.8 ಗ್ರಾಂ ತೂಕ ಹೊಂದಿವೆ.
ಪ್ರಾಮಾಣಿಕತೆಯದ್ದೇ ಚರ್ಚೆ
ಸಾಮಾಜಿಕ ಜಾಲತಾಣದಲ್ಲಿ ಕೂಲಿ ಕಾರ್ಮಿಕರ ಪ್ರಾಮಾಣಿಕತೆಯ ಬಗ್ಗೆ ಚರ್ಚೆಯಾಗುತ್ತಿದೆ. ಹೊಂಬಣ್ಣದ ನಾಣ್ಯಗಳು ಸಿಕ್ಕ ಕೂಡಲೇ ಕಾರ್ಮಿಕರು ಸೀದ ಅಧಿಕಾರಿಗಳ ಬಳಿ ಬಂದು ನಾಣ್ಯಗಳನ್ನು ನೀಡಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಹಸ್ತಾಂತರಿಸಲಾಗಿದೆ. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾನೆಗೆ ಒಪ್ಪಿಸಲಾಗಿದೆ.

ತಲಕಾಡಿನ ಗಂಗರ ರಾಜಲಾಂಛನ
ಪತ್ತೆಯಾದ ನಾಣ್ಯಗಳ ಮೇಲೆ ಆನೆಗಳ ಚಿತ್ರ ಇದೆ. ತಲಕಾಡಿನ ಗಂಗ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಇದು ಗಂಗರ ಕಾಲಕ್ಕೆ ಸಂಬಂಧಿಸಿದ ನಾಣ್ಯಗಳಾಗಿರಬಹುದು ಎಂದು ಹೇಳಲಾಗಿದೆ. ಆದರೆ ನಾಣ್ಯಗಳ ನಿಖರ ಕಾಲಘಟ್ಟ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಖಚಿತಪಡಿಸಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಸಿಕ್ಕರೂ ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಸವದತ್ತಿ ತಾಲೂಕು ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಸಾವಿರ ವರ್ಷಗಳ ಇತಿಹಾಸ
ನಾಣ್ಯಗಳ ಐತಿಹಾಸಿಕ ಮಹತ್ವ, ಮೂಲ ಮತ್ತು ನಿಖರವಾದ ಅವಧಿಯ ಮೌಲ್ಯಮಾಪನಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅವುಗಳ ಗೋಚರತೆಯ ಆಧಾರದ ಮೇಲೆ, ನಾಣ್ಯಗಳು 800 ರಿಂದ 1,000 ವರ್ಷಗಳಷ್ಟು ಹಳೆಯದಾಗಿವೆ ಎಂದು ತಾತ್ಕಾಲಿಕವಾಗಿ ಶಂಕಿಸಲಾಗಿದೆ. ಪುರಾತತ್ವ ಇಲಾಖೆಯ ಪರೀಕ್ಷೆಯ ನಂತರ ನಿಜವಾದ ಅವಧಿ, ಯಾರ ಕಾಲದ್ದು ಎಂಬೆಲ್ಲಾ ಮಾಹಿತಿ ದೊರೆಯಲಿದೆ.



