ಹೊಸದಿಗಂತ ವರದಿ ಹಾನಗಲ್ಲ:
ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಕೇಳಬೇಕು. ಜನರು ಕಚೇರಿಗಳಿಗೆ ಅಲೆಯಬಾರದು ಎಂಬ ಕಾರಣಕ್ಕೆ ಪ್ರಜಾಸೇವೆ ಕಾರ್ಯಕ್ರಮ ಅನುಕೂಲ ಆಗಲಿದೆ ಎಂದು ಸಕ್ಕರೆ, ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಪ್ರಜಾಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೂ ಒಂದೇ ಬಾರಿ ಪರಿಹಾರ ಸಿಗುತ್ತದೆ ಎಂದಲ್ಲ. ಆದರೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಿದೆ ಎಂದರು.
ಇದನ್ನೂ ಓದಿ:
ಸರ್ಕಾರದ ಮಟ್ಟದಲ್ಲಿ ಆಗುವ ಸಮಸ್ಯೆಗಳನ್ನು ಹೊರತುಪಡಿಸಿ ಜಿಲ್ಲಾ ಮಟ್ಟದ ಸಮಸ್ಯೆಗಳಿಗೆ ನಾವು ಪರಿಹಾರ ಕೊಡುತ್ತೇವೆ. ಸರ್ಕಾರದ ಮಟ್ಟದಲ್ಲಿ ಆಗುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುತ್ತೇವೆ. ಕಳಸಾ ಬಂಡೂರಿ, ವರದಾ ಬೇಡ್ತಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೂ ಕ್ರಮ ವಹಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಇದೇ ವೇಳೆ ವಿವಿಧ ಇಲಾಖೆಯ ಮಳಿಗೆಗಳನ್ನು ಉದ್ಘಾಟಿಸಿದರು. ಶಾಸಕ ಶ್ರೀನಿವಾಸ ಮಾನೆ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸೀಒ ದಲ್ಜಿತ್‌ಕುಮಾರ, ಎಸ್ಪಿ ಯಶೋದಾ ವಂಟಗೋಡಿ, ಎಸಿ ಎಚ್.ಬಿ. ವಿಜಯಕುಮಾರ, ಹಾನಗಲ್ ತಹಶಿಲ್ದಾರ್, ವಿಠಲ ಚೌಗಲಾ, ತಾಪಂ ಇಒ ಜಗದೀಶ ಕಮ್ಮಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ, ಬಿಇಒ ಆರ್.ವಿ.ಚಿನ್ನಕಟ್ಟಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿರೇಶ ಬೈಲವಾಳ, ಚಂದ್ರಪ್ಪ ಜಾಲಗಾರ, ಪುಟ್ಟಪ್ಪ ನರೆಗಲ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



