ಹೊಸದಿಗಂತ ವರದಿ ವಿಜಯಪುರ:
ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 1.30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಿಜಯಪುರ ತಾಲೂಕಿನ ಹಂಚನಾಳ ತಾಂಡಾ ನಂ.1ರ ಕಿಶನ್ ನಾಥು ಚವ್ಹಾಣ, ಪ್ರಕಾಶ ಕಿಶನ್ ಚವ್ಹಾಣ, ಮಿಥುನ್ ಕಿಶನ್ ಚವ್ಹಾಣ, ಪ್ರಕಾಶ ಚಂದು ರಜಪೂತ ಹಾಗೂ ಬೇಬಿ ಕಿಶನ್ ಚವ್ಹಾಣ ಶಿಕ್ಷೆಗೊಳಗಾದ ಆರೋಪಿಗಳು.
ಜು.7, 2016 ರಂದು ಈ ಕೊಲೆ ಘಟನೆ ನಡೆದಿದ್ದು, ಇಲ್ಲಿನ ಮೃತ ಚಂದ್ರಶೇಖರ ಪೋಮು ಚವ್ಹಾಣ ಅವರು ಈ ಹಿಂದೆ ಆರೋಪಿ ಕಿಶನ್ ನಾಥು ಚವ್ಹಾಣ ಅವರಿಗೆ 5 ಲಕ್ಷ ರೂ. ಸಾಲ ನೀಡಿದ್ದರು ಎನ್ನಲಾಗಿದೆ. ಹಣವನ್ನು ವಾಪಸ್ ನೀಡುವಂತೆ ಚಂದ್ರಶೇಖರ ಅವರು ಆರೋಪಿತರನ್ನು ಪದೇಪದೇ ಕೇಳುತ್ತಿದ್ದರು.
ಇದನ್ನೂ ಓದಿ:
ಇದೇ ವಿಚಾರವಾಗಿ ಆರೋಪಿತರು ಚಂದ್ರಶೇಖರ ಅವರನ್ನು ಹಣ ನೀಡುವುದಾಗಿ ನಂಬಿಸಿ ತಮ್ಮ ಮನೆಗೆ ಕರೆಸಿಕೊಂಡು, ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ತಲೆ, ಕುತ್ತಿಗೆ ಮತ್ತು ಹೊಟ್ಟೆಗೆ ಹೊಡೆದು ಕೊಲೆ ಮಾಡಿದ್ದರು ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಅವರು ಅಭಿಯೋಗದ ಪರ ಮಂಡಿಸಲಾದ ಸಾಕ್ಷ್ಯ ಮತ್ತು ಪುರಾವೆಗಳನ್ನು ಪರಿಶೀಲಿಸಿ, ಆರೋಪಿತರ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, 5 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಅಂದಿನ ಸಿಪಿಐ ಆರ್.ಎಸ್. ಚೌಧರಿ ನಡೆಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್. ಹಕೀಮ್ ಅವರು ವಾದ ಮಂಡಿಸಿದ್ದರು.



