ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಿನ ಹಾಲು ಮತ್ತು ತುಪ್ಪಗಳನ್ನು ಪ್ರಾಣಿ ಹಿಂಸೆಯ ವ್ಯಾಪ್ತಿಗೆ ಸೇರಿಸುವ ಅಗತ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶನಿವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.
ವೀಗನ್ ಸಿದ್ಧಾಂತವು ಹಾಲು ಮತ್ತು ತುಪ್ಪವನ್ನೂ ಹಿಂಸೆಯ ವ್ಯಾಪ್ತಿಗೆ ಸೇರಿಸಿದೆ. ಆದರೆ ಗೋವಿನಲ್ಲಿ ಕರುವಿನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುತ್ತದೆ. ಹಾಲು ಕರೆಯುವಾಗ ಕರುವಿಗೆ ಅಗತ್ಯವಿರುವ ಹಾಲನ್ನು ಬಿಟ್ಟು ಉಳಿದ ಹಾಲನ್ನು ಮಾತ್ರ ಪಡೆಯುವ ಪದ್ಧತಿ ಭಾರತದಲ್ಲಿ ಇದೆ. ಹೀಗಾಗಿ ಹಾಲು ಮತ್ತು ತುಪ್ಪದ ಹಿಂದೆ ಪ್ರಾಣಿ ಹಿಂಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆಯುರ್ವೇದವು ನೀರು, ತುಪ್ಪ, ಹಾಲು ಮತ್ತು ಅಕ್ಕಿಯನ್ನು ಎಲ್ಲರಿಗೂ ಹೊಂದುವ ಆಹಾರಗಳೆಂದು ಗುರುತಿಸಿದ್ದು, ಇವುಗಳನ್ನು ‘ಜಾತಿ ಸಾತ್ಮ್ಯ’ ಎಂದು ಕರೆಯಲಾಗುತ್ತದೆ. ಪ್ರಕೃತಿಯಲ್ಲಿ ದೊರೆಯುವ ಆಹಾರವನ್ನು ಸೂಕ್ತ ರೀತಿಯಲ್ಲಿ ಬಳಸುವುದು ಮುಖ್ಯವಾಗಿದ್ದು, ಆಹಾರದ ವಿಚಾರದಲ್ಲಿ ಕರ್ಮ ಸಿದ್ಧಾಂತದ ಪಾತ್ರವೂ ಇದೆ ಎಂದು ಶ್ರೀಗಳು ವಿವರಿಸಿದರು.
ಆಹಾರದಲ್ಲೂ ಇರಲಿ ಎಚ್ಚರಿಕೆ
ಆಹಾರವೇ ಪಾಪಗಳು ನಮ್ಮನ್ನು ಸೇರುವ ಪ್ರಮುಖ ದ್ವಾರವಾಗಿರುವುದರಿಂದ ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು. ಮನುಷ್ಯನು ನಡೆದುಕೊಂಡು ಹೋಗುವಾಗಲೂ ಕೆಲವು ಜೀವಿಗಳಿಗೆ ಹಿಂಸೆಯಾಗಬಹುದು. ಸಸ್ಯಾಹಾರ ತಯಾರಿಸುವ ಸಂದರ್ಭದಲ್ಲಿಯೂ ಸೂಕ್ಷ್ಮ ಜೀವಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಡುಗೆ ಮಾಡುವಾಗ ಉಂಟಾಗುವ ಹಿಂಸೆಗೆ ಪ್ರಾಯಶ್ಚಿತ್ತವಾಗಿ ಗೃಹಸ್ಥರಿಗೆ ‘ವೈಶ್ವದೇವ’ ಆಚರಣೆಯನ್ನು ಶಾಸ್ತ್ರಗಳು ಸೂಚಿಸಿವೆ ಎಂದರು.

ಕೆಲವು ವರ್ಷಗಳ ಹಿಂದೆ ಗೋಕರ್ಣದ ಹನುಮಜ್ಜನ್ಮಭೂಮಿಗೆ ಭೇಟಿ ನೀಡಿದ್ದ ವೇಳೆ ವಿದೇಶಿ ದಂಪತಿಯೊಬ್ಬರು ಮಾಂಸಾಹಾರ ತ್ಯಜಿಸುವಂತೆ ತಮ್ಮ ಪತಿಗೆ ಸಲಹೆ ನೀಡುವಂತೆ ಕೇಳಿಕೊಂಡ ಪ್ರಸಂಗವನ್ನೂ ಶ್ರೀಗಳು ನೆನಪಿಸಿಕೊಂಡರು. ಸಸ್ಯಾಹಾರದಲ್ಲಿ ಗಿಡ ಮರಗಳ ಹಿಂಸೆಯಾಗುತ್ತದೆ. ಅದೂ ಹಿಂಸೆಯಲ್ಲವೇ? ಎಂದು ಆ ವ್ಯಕ್ತಿ ನಮ್ಮಲ್ಲಿ ಪ್ರಶ್ನಿಸಿದಾಗ, ಭಾರತೀಯ ಪರಂಪರೆ ಅಹಿಂಸೆಯಿಂದ ಬದುಕಬೇಕು; ಅದು ಸಾಧ್ಯವಾಗದಿದ್ದರೆ ಅಲ್ಪ ಹಿಂಸೆಯಿಂದ ಬದುಕಬೇಕು ಎಂದು ತಿಳಿಸುತ್ತದೆ ಎಂದರು. ಮಾಂಸದಲ್ಲಿಯೂ ಕೆಲವು ಗುಣಗಳಿವೆ ಎಂದು ಗ್ರಂಥಗಳು ಹೇಳುತ್ತವೆ. ಆದರೆ ಅದರಲ್ಲಿ ಹಿಂಸೆಯ ಪ್ರಮಾಣ ಹೆಚ್ಚಿರುವ ಕಾರಣ ಅದನ್ನು ಶಿಫಾರಸು ಮಾಡಿಲ್ಲ ಎಂದು ಅಭಿಪ್ರಾಯಪಟ್ಟರು.
ಕೃಷ್ಣಾಷ್ಟಮಿ ಸಂಭಮ:
ಕೃಷ್ಣಾಷ್ಟಮಿಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಗಾಗಿ ಮೊಸರು ಕಡೆಯುವುದು, ಹಗ್ಗ ಜಗ್ಗಾಟ, ಬಾಳೆಗೊನೆ ಸ್ಪರ್ಧೆ, ಗೋವುಗಳೊಂದಿಗೆ ಮಕ್ಕಳು, ಶ್ರೀಕೃಷ್ಣ ರೂಪಕ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾತ್ರಿ 12.09 ಕ್ಕೆ ಶ್ರೀಕೃಷ್ಣ ಜನ್ಮೋತ್ಸವದ ಅಂಗವಾಗಿ ಪೂಜೆ, ಶ್ರೀಗಳಿಂದ ಬಾಲಕೃಷ್ಣನಿಗೆ ಪುಷ್ಪಾರ್ಚನೆ ನಡೆಯಿತು. ಉಪಸ್ಥಿತರಿದ್ದ ಮಾತೆಯರು, ಮಕ್ಕಳು ಹಾಗೂ ಭಕ್ತರು ಬಾಲ ಕೃಷ್ಣ ತೊಟ್ಟಿಲನ್ನು ತೂಗಿ ಸಂಭ್ರಮಿಸಿದರು.
ಬೆಂಗಳೂರು ದಕ್ಷಿಣ ಹವ್ಯಕ ಮಂಡಲದ ಸರ್ವಧಾರಿ, ಜಯಪ್ರಕಾಶ, ಸೋಮೇಶ್ವರ, ಕೋರಮಂಗಲ ವಲಯಗಳ ಪರವಾಗಿ ಎ ರಾಮ ಭಟ್ಟ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಮೋಹನ ಭಾಸ್ಕರ ಹೆಗಡೆ, ಜಿ.ಜಿ. ಹೆಗಡೆ, ಎನ್. ಜಿ. ಭಾಗ್ವತ್, ಅನಿತಾ ಭಟ್, ಅರ್ಚನಾ ಕುರುವೇರಿ, ದಿನಪ್ರಧಾನರಾಗಿ ಬೇರ್ಕಡವು ಶ್ಯಾಮ ಭಟ್ ದಂಪತಿ ಉಪಸ್ಥಿತರಿದ್ದರು.



