September 6, 2026
Sunday, September 6, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ಅಮೃತ ಸಮಾನವಾದ ಜಲವನ್ನು ವಿಷವಾಗಿಸದಿರಿ: ಪ್ಲಾಸ್ಟಿಕ್ ಬಾಟಲ್ ನೀರಿನ ಬಗ್ಗೆ ರಾಘವೇಶ್ವರ ಶ್ರೀ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀರು ಜೀವಿಗಳ ಪ್ರಾಣವಾಗಿದ್ದು, ಅಮೃತ ಸಮಾನವಾದ ಜಲವನ್ನು ಪ್ಲಾಸ್ಟಿಕ್ ಮೂಲಕ ವಿಷವಾಗಿಸಬಾರದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಭಾನುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಸಂಸ್ಕೃತದಲ್ಲಿ ನೀರಿಗೆ ‘ಜೀವನ’ ಎಂಬ ಪರ್ಯಾಯ ಪದವಿದೆ. ಇದರಿಂದಲೇ ನೀರಿನ ಮಹತ್ವವನ್ನು ಅರಿಯಬಹುದು. ಪ್ರಾಚೀನರು ನೀರನ್ನು ನೆಲದೊಳಗಿನ ನೀರು ಹಾಗೂ ನೆಲ ಮುಟ್ಟದ ನೀರು ಎಂದು ಪ್ರಮುಖವಾಗಿ ವಿಭಾಗಿಸಿದ್ದು, ಇವುಗಳನ್ನೂ ವಿವಿಧ ರೀತಿಯಲ್ಲಿ ವರ್ಗೀಕರಿಸಿ, ಯಾವ ರೀತಿಯ ನೀರು ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿದ್ದರು. ಆಯುರ್ವೇದದಲ್ಲಿಯೂ ನೀರಿನ ಗುಣ ಹಾಗೂ ಅದರ ಬಳಕೆಯ ಕುರಿತು ವ್ಯಾಪಕ ಸಂಶೋಧನೆ ನಡೆದಿದೆ. ಇಂತಹ ಜ್ಞಾನವನ್ನು ಇಂದಿನ ಜೀವನದಲ್ಲೂ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.

ಇಂದು ದೇವರು ನೀಡಿರುವ ಅತ್ಯಮೂಲ್ಯ ಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿ ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ. ಪ್ಲಾಸ್ಟಿಕ್‌ನಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದರಿಂದ ನೀರಿನೊಂದಿಗೆ ಪ್ಲಾಸ್ಟಿಕ್‌ನ ಅಂಶಗಳೂ ದೇಹಕ್ಕೆ ಸೇರುವ ಸಾಧ್ಯತೆಯಿದ್ದು, ಇದು ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಆಧುನಿಕ ವಿಜ್ಞಾನವೂ ಸೂಚಿಸುತ್ತದೆ ಎಂದು ರಾಘವೇಶ್ವರ ಶ್ರೀ ಹೇಳಿದರು.

ನೀರು ರಾಜಸ ಮತ್ತು ತಾಮಸ ಗುಣಗಳನ್ನು ನಿಯಂತ್ರಿಸುವುದರ ಜೊತೆಗೆ ಹೃದಯಕ್ಕೆ ಬಲ ನೀಡುತ್ತದೆ. ನೀರಿಗೆ ಸ್ವತಃ ರುಚಿ ಅಥವಾ ಬಣ್ಣವಿಲ್ಲದಿದ್ದರೂ ಅದರ ಮಹತ್ವ ಅಪಾರವಾಗಿದೆ ಎಂದರು.

ಆಹಾರದ ವಿಚಾರದಲ್ಲಿಯೂ ಭಾರತೀಯ ಪರಂಪರೆ ಎಲ್ಲರಿಗೂ ಒಂದೇ ರೀತಿಯ ಆಹಾರವನ್ನು ಸೂಚಿಸಿಲ್ಲ. ವ್ಯಕ್ತಿಯ ಗುಣ, ಕರ್ಮ ಮತ್ತು ಜೀವನಶೈಲಿಗೆ ಅನುಗುಣವಾಗಿ ಆಹಾರ ಸೇವಿಸುವ ಪರಿಕಲ್ಪನೆ ನಮ್ಮ ಪರಂಪರೆಯಲ್ಲಿದೆ ಎಂದು ಅವರು ವಿವರಿಸಿದರು.

ಗಾಣಿಗ ಸಮಾಜದಿಂದ ಸ್ವರ್ಣಪಾದುಕಾ ಪೂಜೆ :

ಇದೇ ಸಂದರ್ಭದಲ್ಲಿ ಶ್ರೀಮಠದ ಪರಂಪರೆಯ ಗಾಣಿಗ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿಸಲಾಯಿತು. ಪೂಜೆ ಸ್ವೀಕರಿಸಿದ ರಾಘವೇಶ್ವರ ಶ್ರೀಗಳು, ಗಾಣಿಗ ಸಮಾಜದೊಂದಿಗೆ ಶ್ರೀಮಠದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಹಾಗೂ ಗುರು-ಶಿಷ್ಯ ಸಂಬಂಧ ಸದೃಢವಾಗಲಿ ಎಂದು ಹಾರೈಸಿದರು. ಮಹೇಶ ಶೆಟ್ಟಿ, ದಾಮೋಧರ ಶೆಟ್ಟಿ, ಸುಭಾಸ್ ಶೆಟ್ಟಿ ಭಟ್ಕಳ, ನಾರಾಯಣ ಶೆಟ್ಟಿ ಭಟ್ಕಳ, ಮನೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ದಕ್ಷಿಣ ಬೆಂಗಳೂರು ಹವ್ಯಕ ಮಂಡಲ ವಿಜಯನಗರ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ಬನಶಂಕರಿ ಹವ್ಯಕ ವಲಯಗಳ ಪರವಾಗಿ ದತ್ತಾತ್ರೇಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೊಣಂದೂರು ಪ್ರಕಾಶ, ಅನುರಾಧ ಪಾರ್ವತಿ, ಡಾ. ವೈ. ವಿ. ಕೃಷ್ಣಮೂರ್ತಿ, ಗುರುರಾಜ ಪಡೀಲು, ದಿನಪ್ರಧಾನರಾಗಿ ಸಿಎ. ಸಿಎಸ್. ಗೋಪಾಲಕೃಷ್ಣ ಹೆಗಡೆ ಹುಕ್ಲುಮಕ್ಕಿ ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !