ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಂದ್ರೆ ಸಾಕು, ಅಲ್ಲಿ ಪಂದ್ಯಗಳಿಗಿಂತ ವಿವಾದಗಳೇ ಜಾಸ್ತಿ ಸದ್ದು ಮಾಡ್ತವೆ ಅನ್ನೋದು ಇಡೀ ಪ್ರಪಂಚಕ್ಕೇ ಗೊತ್ತು. ಆದ್ರೆ ಈ ಬಾರಿ ಅವರು ಮಾಡಿರೋ ಎಡವಟ್ಟು ಮಾತ್ರ ಸಾಧಾರಣದ್ದಲ್ಲ. ಇಂಗ್ಲೆಂಡ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೀತಿರುವಾಗಲೇ, “ನಾವು ಪಂದ್ಯ ಆಡಲ್ಲ, ಬಹಿಷ್ಕಾರ ಹಾಕ್ತೀವಿ” ಎಂದು ಪಿಸಿಬಿ ಬೆದರಿಕೆ ಹಾಕಿ, ಇಡೀ ಪ್ರಪಂಚದ ಮುಂದೆ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದೆ.
ಇದಕ್ಕೆಲ್ಲ ಕಾರಣವಾಗಿದ್ದು ಪಾಕಿಸ್ತಾನದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಇಬ್ಬರು ಮಕ್ಕಳು ಕೊಟ್ಟ ಒಂದು ಸಂದರ್ಶನ.

ಅಷ್ಟಕ್ಕೂ ಆಗಿದ್ದೇನು?
ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನ, ಇಂಗ್ಲೆಂಡ್ನ ಪ್ರಸಿದ್ಧ ‘ಸ್ಕೈ ಸ್ಪೋರ್ಟ್ಸ್’ ವಾಹಿನಿಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಅಥರ್ಟನ್ ಅವರು ಇಮ್ರಾನ್ ಖಾನ್ ಪುತ್ರರಾದ ಸುಲೈಮಾನ್ ಮತ್ತು ಕಾಸಿಮ್ ಅವರನ್ನ ಸಂದರ್ಶನ ಮಾಡಿದ್ರು. ಆ ಸಂದರ್ಶನದಲ್ಲಿ ಇಬ್ಬರೂ ಸಹೋದರರು ಜೈಲಿನಲ್ಲಿರುವ ತಮ್ಮ ಅಪ್ಪನ ಆರೋಗ್ಯ ಪರಿಸ್ಥಿತಿ ಮತ್ತು ಅವರಿಗೆ ಸಿಗಬೇಕಾದ ಕನಿಷ್ಠ ಮಾನವ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು.
“ಇಂಗ್ಲೆಂಡ್ನಲ್ಲಿ 22 ವರುಷ ಬದುಕಿದ, ಕ್ರಿಕೆಟ್ನಲ್ಲೇ ದೊಡ್ಡ ಹೆಸರು ಮಾಡಿದ ಒಬ್ಬ ಮಾಜಿ ಆಟಗಾರನ ಆರೋಗ್ಯದ ಬಗ್ಗೆ ಮಾತಾಡೋದು ರಾಜಕೀಯ ಹೆಂಗೆ ಆಗುತ್ತೆ? ಇದು ಕೇವಲ ಒಬ್ಬ ಅಪ್ಪನ ಮೇಲಿರೋ ಕಾಳಜಿ ಅಷ್ಟೇ,” ಎಂದು ಸುಲೈಮಾನ್ ಮತ್ತು ಕಾಸಿಮ್ ಸ್ಪಷ್ಟವಾಗಿ ಹೇಳಿದ್ರು.

ಪಿಸಿಬಿ ಮಾಡಿದ್ದೇನು?
ಆದ್ರೆ, ಇದನ್ನೇ ನೆಪವಾಗಿಟ್ಟುಕೊಂಡ ಪಿಸಿಬಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತು. “ಈ ರಾಜಕೀಯ ಪ್ರೇರಿತ ಸಂದರ್ಶನವನ್ನು ಪ್ರಸಾರ ಮಾಡಬಾರದು. ಒಂದು ವೇಳೆ ಪ್ರಸಾರ ಮಾಡಿದ್ರೆ, ಲಂಚ್ ಬ್ರೇಕ್ ಆದ್ಮೇಲೆ ನಮ್ಮ ಪಾಕಿಸ್ತಾನ್ ಟೀಮ್ನ ಮೈದಾನಕ್ಕೆ ಇಳಿಸಲ್ಲ. ಪಂದ್ಯವನ್ನೇ ಬಹಿಷ್ಕರಿಸ್ತೀವಿ” ಎಂದು ಬೆದರಿಕೆ ಹಾಕಿತು. ಕೊನೆಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಪಂದ್ಯ ಮುಂದುವರಿಯುವಂತೆ ಮಾಡಬೇಕಾಯ್ತು.
ಸುಲೈಮಾನ್-ಕಾಸಿಮ್ ಆಕ್ರೋಶ
ಈ ಇಡೀ ಘಟನೆಯಿಂದ ಕೆರಳಿದ ಇಮ್ರಾನ್ ಪುತ್ರ ಕಾಸಿಮ್ ಖಾನ್, ಬ್ರಿಟಿಷ್ ಪತ್ರಿಕೆ ‘ದಿ ಟೆಲಿಗ್ರಾಫ್’ ಜೊತೆ ಮಾತನಾಡಿ, “ಪಿಸಿಬಿ ಅಧಿಕಾರಿಗಳು ತಾವೆಷ್ಟು ವಿವೇಚನಾರಹಿತರು ಎಂಬುದನ್ನು ಇಡೀ ಜಗತ್ತಿನ ಮುಂದೆ ತಾವೇ ಸಾಬೀತುಪಡಿಸಿಕೊಂಡಿದ್ದಾರೆ. ಕ್ರಿಕೆಟ್ ಮಂಡಳಿಯ ಘನತೆಯನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಬ್ಬ ಮಗ ಸುಲೈಮಾನ್ ಮಾತನಾಡಿ, “ಬೋರ್ಡ್ನಿಂದ ಏನಾದ್ರೂ ಹೇಳಿಕೆ ಬರಬಹುದು ಅಂದುಕೊಂಡಿದ್ದೆ. ಆದ್ರೆ ಪಂದ್ಯವನ್ನೇ ಆಡಲ್ಲ ಎಂದು ಮೈದಾನದಿಂದ ಕಾಲ್ತೆಗೆಯೋ ಹಂತಕ್ಕೆ ಹೋಗ್ತಾರೆ ಎಂದು ನಾನು ಖಂಡಿತ ಅಂದುಕೊಂಡಿರಲಿಲ್ಲ,” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ಗೆ ಗೊತ್ತೇ ಇಲ್ಲ
ತಮಾಷೆ ಅಂದ್ರೆ, ಈ ವಿವಾದ ರಂಪಾಟ ಆಗ್ತಿದ್ದಂತೆಯೇ ಅತ್ತ ಪಾಕಿಸ್ತಾನ್ ಟೀಮ್ ಕ್ಯಾಪ್ಟನ್ ಬಾಬರ್ ಆಝಂ ಮತ್ತು ಕೋಚ್ ಸರ್ಫರಾಝ್ ಅಹಮದ್, “ನಮಗೆ ಇಂಥದ್ದೊಂದು ಮ್ಯಾಚ್ ಬಾಯ್ಕಾಟ್ ಮಾಡೋ ನಿರ್ಧಾರದ ಬಗ್ಗೆ ಮಾಹಿತಿಯೇ ಇರಲಿಲ್ಲ! ಎಂದು ಹೇಳಿಕೊಂಡಿದ್ದಾರೆ. ಅಂದರೆ, ಇದು ಆಟಗಾರರ ನಿರ್ಧಾರವಾಗಿರಲಿಲ್ಲ, ಬರೀ ಕ್ರಿಕೆಟ್ ಬೋರ್ಡ್ನಲ್ಲಿರೋ ಮೇಲಾಧಿಕಾರಿಗಳು ಮಾಡಿದ ಗಿಮಿಕ್ ಅನ್ನೋದು ಜಗಜ್ಜಾಹೀರಾಯ್ತು.
ಪ್ರಸ್ತುತ ಪಿಸಿಬಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನ್ ಸರ್ಕಾರದ ಆಂತರಿಕ ಭದ್ರತಾ ಸಚಿವರೂ ಆಗಿದ್ದಾರೆ. ಕ್ರಿಕೆಟ್ ಬೋರ್ಡ್ನಲ್ಲಿ ರಾಜಕೀಯದ ಹಸ್ತಕ್ಷೇಪ ಎಷ್ಟರಮಟ್ಟಿಗೆ ತಲುಪಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.



