September 7, 2026
Monday, September 7, 2026
spot_img

ನಡುರಸ್ತೆಯಲ್ಲೇ ತಲ್ವಾರ್‌ ಝಳಪಿಸಿದ ಯುವಕರು: ದಾವಣಗೆರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಹೊಸದಿಗಂತ ವರದಿ ದಾವಣಗೆರೆ:

ಹಳೆಯ ವೈಷಮ್ಯದಿಂದ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಯುವಕರು ತಲ್ವಾರ್, ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಇಲ್ಲಿನ ಬೀಡಿ ಲೇಔಟ್ ನಿವಾಸಿಗಳಾದ ಮೈನು, ಜುನೇದ್ ಹಾಗೂ ಇರ್ಫಾನ್ ಸೇರಿದಂತೆ ನಾಲ್ವರು ಮುಖ್ಯರಸ್ತೆಯಲ್ಲಿ ನಿಂತಿದ್ದ ವೇಳೆ ಮಹಮ್ಮದ್ ಸಹಿತ 20ಕ್ಕೂ ಹೆಚ್ಚು ಯುವಕರು ಬಂದು ಜಗಳ ಶುರು ಮಾಡಿದ್ದಾರೆ. ಅದು ತೀವ್ರ ಸ್ವರೂಪ ಪಡೆದು, ನೋಡನೋಡುತ್ತಿದ್ದಂತೆ ಎರಡೂ ಗುಂಪಿನವರ ಮಧ್ಯೆ ತಲ್ವಾರ್, ದೊಣ್ಣೆಗಳಿಂದ ಬಡಿದಾಟವಾಗಿದೆ.

ಇದನ್ನೂ ಓದಿ:

ಪರಸ್ಪರರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಕೆಲವರ ಕುತ್ತಿಗೆ, ದೇಹ ನೆಟ್ಟಗೆ ನಿಲ್ಲದಂತಾಗಿದ್ದು, ಮತ್ತೆ ಕೆಲವರ ತಲೆ ಬುರುಡೆಗೆ ಮಚ್ಚಿನೇಟು ಬಿದ್ದಿದೆ. ಮತ್ತೆ ಕೆಲವರ ಮುಖ, ಮೈಯೆಲ್ಲಾ ರಕ್ತಸಿಕ್ತ ಗಾಯಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯ ಯುವಕರು, ಹಿರಿಯರು ತಕ್ಷಣವೇ ದಾವಣಗೆರೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ದಾಖಲಿಸಿದ್ದಾರೆ. ನಡುರಸ್ತೆಯಲ್ಲೇ ಯಾವುದೇ ಅಂಜಿಕೆ, ಪೊಲೀಸರ ಭಯವೂ ಇಲ್ಲದೇ ತಲ್ವಾರ್ ಬೀಸುತ್ತಾ, ದೊಣ್ಣೆಗಳಿಂದ ಹಲ್ಲೆ ಮಾಡುವುದನ್ನು ಕಂಡ ಸ್ಥಳೀಯ ನಿವಾಸಿಗಳು ತೀವ್ರ ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಹಿಂದೇಟು ಹಾಕುವಂತಹ ವಾತಾವರಣ ಈಗ ಅಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘರ್ಷಣೆ ನಂತರದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !