September 8, 2026
Tuesday, September 8, 2026
spot_img

‘ನಾಳೆ ಹೋಗು ಮಗಾ’ ಎಂದಿದ್ದ ಅಮ್ಮನ ಮಾತು ಕೇಳಲಿಲ್ಲ: ದೆಹಲಿ ಪಿಜಿ ಕುಸಿತದಲ್ಲಿ ವಿದ್ಯಾರ್ಥಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಗಾ ಇವತ್ತು ನೀನು ಹೋಗೋದು ಬೇಡ ನಾಳೆ ಹೋಗು ಎಂದು ಗೋಗರೆದಿದ್ದ ಅಮ್ಮ, ರೈಲಿನಲ್ಲಿ ಅಣ್ಣನಿಗೆ ಟಾಟಾ ಮಾಡುತ್ತಾ ಒಂಟಿ ಸೀನು ಹಾಕಿದ್ದ ತಂಗಿ! ಅಪಘಾತದ ಮುನ್ಸೂಚನೆಗಳನ್ನು ʼಇದೆಲ್ಲಾ ಮೂಢನಂಬಿಕೆʼ ಎಂದು ತಳ್ಳಿಹಾಕಿದ್ದ ಮಗ ಇದೀಗ ಸಮಾಧಿಯೊಳಗೆ ತಣ್ಣಗೆ ಮಲಗಿಬಿಟ್ಟಿದ್ದಾನೆ!

ಹೌದು, ದೆಹಲಿಯ ಪಿಜಿ ಬಿಲ್ಡಿಂಗ್‌ ಕುಸಿತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಪೋಷಕರು ʼಎಷ್ಟು ಹೇಳಿದ್ರೂ ಕೇಳಲಿಲ್ಲ. ನನ್ನ ಮಾತು ಕೇಳಿ ಒಂದು ದಿನ ಉಳಿದಿದ್ರೆ ಪ್ರಾಣಕಂಟಕದಿಂದ ಪಾರಾಗುತ್ತಿದ್ದʼ ಎಂದು ಕಣ್ಣೀರಿಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಐದು ಅಂತಸ್ತಿನ ಬಾಯ್ಸ್‌ ಪಿಜಿ ಕುಸಿದುಬಿದ್ದಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ ಇದರಲ್ಲಿ ವಿದ್ಯಾರ್ಥಿ ಅರ್ಪಿತ್‌ ಕೂಡ ಒಬ್ಬ!

ಅರ್ಪಿತ್‌ ತಾಯಿ ಇವತ್ತು ಭಾನುವಾರ ಇಲ್ಲೇ ಇದ್ದು ನಾಳೆ ಬೆಳಗ್ಗೆಯೇ ಎದ್ದು ದೆಹಲಿಗೆ ಹೋಗು ಎಂದು ಮಗನನ್ನು ಕೇಳಿದ್ದರು. ಆದರೆ ಅರ್ಪಿತ್‌ ಟಿಕೆಟ್‌ ಬುಕ್‌ ಆಗಿದೆ, ನಾಳೆ ಕ್ಲಾಸ್‌ ಶುರು ಆಗುತ್ತದೆ ಹೋಗಿ ಸೆಟಲ್‌ ಆಗ್ತೀನಿ ಎಂದು ಹಠ ಹಿಡಿದಿದ್ದ. ಇದಾದ ನಂತರ ರೈಲ್ವೇ ನಿಲ್ದಾಣದಲ್ಲಿ ತಂಗಿ ಒಂಟಿ ಸೀನು ನೋಡಿದ ತಾಯಿ ಇದು ಅಪಶಕುನ ಮಗ ಹೋಗೋದು ಬೇಡ ಟಿಕೆಟ್‌ ಹಣ ಹೋದ್ರೆ ಹೋಯ್ತು ಎಂದು ಹೇಳಿದ್ದರು. ಆದರೆ ಅರ್ಪಿತ್‌ ಮಾತ್ರ ಅದೆಲ್ಲ ಮೂಢನಂಬಿಕೆ ಅಮ್ಮಾ ಏನೂ ಆಗೋದಿಲ್ಲ ಎಂದು ಹೇಳಿ ಹೋಗಿದ್ದ.

ಪಿಜಿ ತಲುಪಿದ ಅರ್ಪಿತ್‌ ಅಮ್ಮನಿಗೆ ಕರೆ ಮಾಡಿ, ನಾನು ಹೇಳಿಲ್ವಾ ಏನೂ ಆಗೋದಿಲ್ಲ ಸೇಫ್‌ ಆಗಿ ರೀಚ್‌ ಆಗಿದ್ದೀನಿ ಎಂದು ಹೇಳಿದ್ದ. ಹೀಗೆ ಹೇಳಿದ ಎರಡೇ ಗಂಟೆಯಲ್ಲಿ ಆತ ಹೆಣವಾಗಿದ್ದ! ಮಗ ಸೇಫಾಗಿದ್ದೇನೆ ಎಂದು ಹೇಳಿದರೂ ತಾಯಿ ಹೃದಯ ವಿಲವಿಲನೆ ಒದ್ದಾಡುತ್ತಿತ್ತು. ಒಂದು ಗಂಟೆಯ ನಂತರ ಊಟ ಮಾಡಿದ್ನಾ ಕೇಳೋಣವೆಂದು ತಾಯಿ ಹತ್ತಾರು ಬಾರಿ ಕರೆ ಮಾಡಿದ್ದರೂ ಮಗ ಫೋನ್‌ ರಿಸೀವ್‌ ಮಾಡಿರಲಿಲ್ಲ. ಮಗನಿಗೆ ಏನೋ ಆಗಿದೆ ಹೋಗೋಣ ಬನ್ನಿ ಎಂದು ತಾಯಿ ಚಡಪಡಿಸುತ್ತಿದ್ದ ಹೊತ್ತಿಗೆ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ಕರೆ ಬಂದಿತ್ತು. ಒಂದೇ ಕ್ಷಣದಲ್ಲಿ ತಾಯಿಯ ಜಗತ್ತು ನೆಲಸಮವಾಯಿತು.

ತಾಯಿಯ ಹೃದಯಕ್ಕೆ ಕೆಟ್ಟದರ ಮುನ್ಸೂಚನೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ತಾಯಿಯನ್ನು ದೇವರು ಎಂದೂ ಹೇಳಲಾಗುತ್ತದೆ. ಆಕೆಗೆ ಮುಂದೇನೋ ಕೆಟ್ಟದಾಗುತ್ತದೆ ಅಥವಾ ಮುಂದೇನೋ ಒಳ್ಳೆಯದಾಗುತ್ತದೆ ಎನ್ನುವ ಮುನ್ಸೂಚನೆ ಇರುತ್ತದೆ. ಆಕೆಯ ಗಟ್‌ ಫೀಲಿಂಗ್‌ ಮೂಲಕ ಮಕ್ಕಳನ್ನು ಎಚ್ಚರಿಸುತ್ತಾರೆ. ಕೆಲವೊಮ್ಮೆ ಅಮ್ಮನ ಮಾತು ಕೇಳುವುದು ಕೂಡ ಒಳ್ಳೆಯದೇ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !