ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ನೋರಾ ಫತೇಹಿ ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಅವರು ಹಾಕುವ ಪೋಸ್ಟ್‌ಗಳಿಗೆ ಲಕ್ಷಾಂತರ ಲೈಕ್ಸ್, ಕಮೆಂಟ್ಸ್ ಬರುತ್ತವೆ. ಇದು ಅವರಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಕೂಡ! ಹೇಗೆ ಅಂತೀರಾ? ನೋರಾ ವಿಮಾನಯಾನ ಕಂಪನಿಯ ಬಗ್ಗೆ ಹಾಕಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಮಾನಯಾನ ಕಂಪನಿ ಡ್ಯೂನ್ಸ್ ಏವಿಯೇಷನ್ ಕಂಪನಿ ನೋರಾ ಫತೇಹಿ ವಿರುದ್ಧ ಮೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ. ಚಾರ್ಟರ್ಡ್ ವಿಮಾನದ ಬಗ್ಗೆ ನೋರಾ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಹಾಕಿದ್ದಾರೆ ಎಂದು ಕಂಪನಿ ದೂರಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈನಿಂದ ಜೈಪುರ್‌ಗೆ ಪ್ರಯಾಣ ಬೆಳೆಸಿದ ನೋರಾ ವಿಮಾನದ ಒಳಗೆ ವಿಡಿಯೋ ರೆಕಾರ್ಡ್ ಮಾಡಿದ್ದರು. ಇದೆಂತಹಾ ವಿಮಾನ ಮಕ್ಕಳು ಆಟ ಆಡುವ ಲೆಗೋ ವಿಮಾನದಂತಿದೆ ಎಂದು ಹೇಳಿದ್ದರು. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ನೋರಾ ಫತೇಹಿ ಫಾಲೋವರ್ಸ್ ಕೂಡ ಇನ್ನು ಈ ವಿಮಾನದಲ್ಲಿ ಪ್ರಯಾಣ ಮಾಡೋದಿಲ್ಲ ಎಂದು ಹೇಳಿದ್ದರು. ಈ ವಿಡಿಯೋದಿಂದ ನಮ್ಮ ವ್ಯವಹಾರದ ಮೇಲೆ ಪರಿಣಾಮ ಬಿದ್ದಿದೆ. ಪೋಸ್ಟ್ ನೋಡಿದ ನಂತರ ಜನ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂದು ವಿಮಾನಯಾನ ಕಂಪನಿ ಆರೋಪ ಮಾಡಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮೊಕದ್ದಮೆಯಲ್ಲಿ, ನೋರಾ ಅವರ ಹೇಳಿಕೆಗಳನ್ನು ಯಾವುದೇ ತಾಂತ್ರಿಕ ಜ್ಞಾನ, ಪರಿಶೀಲನೆ ಅಥವಾ ವಾಸ್ತವಿಕ ಆಧಾರವಿಲ್ಲದೆ ಮಾಡಲಾಗಿದೆ ಎಂದು ಕಂಪನಿ ಆರೋಪಿಸಿದೆ. ಡ್ಯೂನ್ಸ್ ಏವಿಯೇಷನ್ ತಮ್ಮ ವಿಮಾನ ಹಾರಾಟಕ್ಕೆ ಯೋಗ್ಯವಾಗಿದ್ದು, ಮಾನ್ಯ ಎನ್‌ಎಸ್‌ಒಪಿ ಅಡಿಯಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಹೇಳಿದೆ. ಮೂರು ಕೋಟಿ ರೂಪಾಯಿ ಹಣದ ಜೊತೆ ಸೋಶಿಯಲ್ ಮೀಡಿಯಾ ಪೋಸ್ಟ್ ಕೂಡ ಡಿಲೀಟ್ ಮಾಡಬೇಕು. ಜೊತೆಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಂಪನಿ ಕೋರಿದೆ.



