September 8, 2026
Tuesday, September 8, 2026
spot_img

ನಾವು 50 ಸಾವಿರ ರೈಲ್ವೆ ಕೋಚ್ ಕಟ್ಟಿದ್ರೆ, ಕಾಂಗ್ರೆಸ್‌ಗೆ 50 ಸಾವಿರ ಶೌಚಾಲಯ ಕಟ್ಟೊಕ್ಕಾಗಿಲ್ಲ: ವಿಪಕ್ಷಗಳ ವಿರುದ್ಧ ಪಿಎಂ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2014ರ ನಂತರ ಭಾರತದಲ್ಲಿ ಬರೋಬ್ಬರಿ 50,000 ಆಧುನಿಕ ರೈಲ್ವೆ ಕೋಚ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಇದೇ ದೇಶವನ್ನು ದಶಕಗಳ ಕಾಲ ಆಳಿದ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ 10 ವರ್ಷಗಳಲ್ಲಿ 50,000 ಶೌಚಾಲಯಗಳನ್ನು ನಿರ್ಮಿಸಲು ಕೂಡ ಸಾಧ್ಯವಾಗಲಿಲ್ಲ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 35,000 ಕೋಟಿಗೂ ಅಧಿಕ ಮೊತ್ತದ ಬೃಹತ್ ಮೂಲಸೌಕರ್ಯ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (WDFC) ಯೋಜನೆಯ ಬಗ್ಗೆ ತಿಳಿಸದ ಪ್ರಧಾನಿ, ವಿರೋಧ ಪಕ್ಷಗಳನ್ನು ಮತ್ತೊಮ್ಮೆ ‘ನಾರಾಜ್ ಫೂಫಾ’ಎಂದು ತಮಾಷೆಯಾಗಿ ಕಾಲೆಳೆದರು.

ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ ಪಿಎಂ

ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ನಿಂದ ಉತ್ತರ ಪ್ರದೇಶದ ದಾದ್ರಿವರೆಗೆ ಸಂಪರ್ಕ ಕಲ್ಪಿಸುವ ವಿಶೇಷ ಸರಕು ಸಾಗಣೆ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ, ಈ ಹೊಸ ಸಾರಿಗೆ ವ್ಯವಸ್ಥೆಯಿಂದ ಟ್ರಕ್ ಚಾಲಕರಿಗೆ ತೊಂದರೆಯಾಗಲಿದೆ ಎಂದು ವಿಪಕ್ಷಗಳು ಕಂಪ್ಲೇಂಟ್ ಮಾಡಲಿವೆ ಎಂದು ವ್ಯಂಗ್ಯವಾಡಿದರು. ಈಗ ನಮ್ಮ ‘ನಾರಾಜ್ ಫೂಫಾ’ ಜೋರಾಗಿ ಕಿರುಚಲು ಶುರು ಮಾಡುತ್ತಾರೆ; ‘ಹಾಗಾದ್ರೆ ಟ್ರಕ್ ಡ್ರೈವರ್‌ಗಳ ಗತಿ ಏನು? ಲಾರಿ ನಡೆಸುವವರು ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸುತ್ತಾರೆ. ಸದ್ಯಕ್ಕಂತೂ ‘ಫೂಫಾ’ ಅವರಿಗೆ ಮಾಡಲು ಒಂದು ಕೆಲಸ ಸಿಕ್ಕಂತಾಗಿದೆ, ಎಂದು ರಾಹುಲ್ ಗಾಂಧಿ ಅವರ ಹೆಸರು ಹೇಳದೆಯೇ ಮೋದಿ ಚಾಟಿ ಬೀಸಿದ್ದಾರೆ.

2014ರ ವರೆಗೆ ಕೇವಲ ಫೈಲ್ ಮುಚ್ಚಿಡುವ ಕೆಲಸವಾಗಿತ್ತು

ಹಳೆಯ ಸರ್ಕಾರದ ನಿಧಾನಗತಿಯ ಕೆಲಸದ ವೈಖರಿಯನ್ನು ತೀವ್ರವಾಗಿ ಟೀಕಿಸಿದ ಪ್ರಧಾನಿ ಮೋದಿ, ಈ ವಿಶೇಷ ಸರಕು ಸಾಗಣೆ ಕಾರಿಡಾರ್‌ನ ಕಲ್ಪನೆ ಮೂಡಿದ್ದು 2004 ರಲ್ಲಿ. ಇದಕ್ಕಾಗಿ 2006 ರಲ್ಲಿ ವಿಶೇಷ ಕಂಪನಿಯನ್ನೂ ಸ್ಥಾಪಿಸಲಾಯಿತು. ಆದರೆ 2014 ರವರೆಗೆ ಫೈಲ್‌ಗಳು ಕೇವಲ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುತ್ತಿದ್ದವೇ ಹೊರತು ಕೆಲಸ ಮಾತ್ರ ಒಂದು ಇಂಚೂ ಮುನ್ನಡೆಯಲಿಲ್ಲ. ದುರದೃಷ್ಟವಶಾತ್ ಆ ಫೈಲ್‌ಗಳಿಗೂ ಒಂದು ಪ್ರತ್ಯೇಕ ಕಾರಿಡಾರ್ ಸಿಗಲಿಲ್ಲ. ಅವು ಅಲ್ಲೇ ಸಿಲುಕಿಕೊಂಡು, ನೇತಾಡಿಕೊಂಡು ಅಲೆಯುತ್ತಿದ್ದವು, ಎಂದು ಹಳೇ ಆಡಳಿತವನ್ನು ನೆನಪಿಸಿದರು.

ಇದನ್ನೂ ಓದಿ:

2014 ರಿಂದ ಈ ಯೋಜನೆಗೆ ರಾಕೆಟ್‌ ವೇಗ ಸಿಕ್ಕಿತ್ತು

2014 ರಲ್ಲಿ ನಿಮ್ಮ ಆಶೀರ್ವಾದದಿಂದ ನಾನು ದೆಹಲಿ ತಲುಪಿದ ತಕ್ಷಣವೇ ಈ ಯೋಜನೆಗೆ ರಾಕೆಟ್ ವೇಗ ನೀಡಿದೆವು. ಇಂದು 2,800 ಕಿಲೋಮೀಟರ್ ಉದ್ದದ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ಗಳ ಕೆಲಸ ಸಂಪೂರ್ಣ ಮುಕ್ತಾಯಗೊಂಡಿದೆ ಎಂದು ಮೋದಿ ಹೆಮ್ಮೆಯಿಂದ ತಿಳಿಸಿದರು.


ಹಿಂದೆ ಪ್ರಯಾಣಿಕರ ರೈಲು ಮತ್ತು ಗೂಡ್ಸ್ ರೈಲುಗಳು ಒಂದೇ ಹಳಿಯಲ್ಲಿ ಚಲಿಸುತ್ತಿದ್ದರಿಂದ ಎರಡೂ ತಡವಾಗುತ್ತಿದ್ದವು. ಆದರೆ ಈಗ ವಿಶೇಷ ಕಾರಿಡಾರ್ ನಿರ್ಮಿಸಿರುವುದರಿಂದ ಸರಕು ಸಾಗಣೆ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ದೇಶದ ಒಟ್ಟು ವ್ಯಾಪಾರ ಮತ್ತು ವಾಣಿಜ್ಯ ರಂಗಕ್ಕೆ ಬಲವಾದ ಬೆನ್ನೆಲುಬು ಸಿಕ್ಕಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !