September 10, 2026
Thursday, September 10, 2026
spot_img

ಮಳೆಗಾಲ ಮುಗಿಯುವ ಹಂತಕ್ಕಿದ್ದರೂ ಬೀಳಲಿಲ್ಲ ಹನಿ! ಬರಪೀಡಿತ ಪಟ್ಟಿಗೆ ಇನ್ನೂ 25 ತಾಲೂಕುಗಳ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಇನ್ನೇನು ಮಳೆಗಾಲ ಮುಗಿಯುತ್ತಾ ಬಂದಿದೆ. ಹೀಗಿದ್ದರೂ ಜನರಿಗೆ ಹತ್ತು ನಿಮಿಷದ ಮಳೆಯೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬರಪೀಡಿತ ತಾಲೂಕುಗಳ ಪಟ್ಟಿಗೆ ಇನ್ನೂ ೨೫ ತಾಲೂಕುಗಳನ್ನು ಸೇರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.

ಒಟ್ಟಾರೆ ಇನ್ನೂ 25 ತಾಲೂಕುಗಳನ್ನು ಲಿಸ್ಟ್‌ಗೆ ಸೇರಿಸಬೇಕು ಎಂದುಕೊಂಡಿದ್ದೇವೆ. ಬರ ಪರಿಸ್ಥಿತಿಯ ಎರಡನೇ ಹಂತದ ಮೌಲ್ಯಮಾಪನವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಲಿಸ್ಟ್‌ ನೀಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಹಲವು ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ತಾಲೂಕುಗಳಿಗೆ ಭೇಟಿ ನೀಡಿ ತದನಂತರ ಅವು ಬರ ಘೋಷಣೆಗೆ ಅಗತ್ಯ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ನೋಡಿ ನಂತರ ಘೋಷಣೆ ಮಾಡಲಾಗುವುದು ಎಂದಿದ್ದಾರೆ.

ಡಿಸೈಡ್‌ ಮಾಡೋದು ಹೇಗೆ?

ಒಂದು ತಾಲೂಕನ್ನು ಬರಪೀಡಿತ ಎಂದು ನಿರ್ಧರಿಸುವುದು ಹೇಗೆ? ಇದಕ್ಕೆ ಪ್ರತ್ಯೇಕ ಮಾನದಂಡಗಳಿವೆ. ಉಪಗ್ರಹ ಚಿತ್ರಗಳು, ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ನಂತರ ತಾಂತ್ರಿಕ ಆಧಾರದ ಮೇಲೆ ವೈಜ್ಞಾನಿಕವಾಗಿ ಬರ ಮೌಲ್ಯಮಾಪನ ಮಾಡಲಾಗುತ್ತದೆ. ಹಂತ ಹಂತವಾಗಿ ಬರ ಮೌಲ್ಯಮಾಪನ ನಡೆಯುತ್ತಿದ್ದು, ಬರಪೀಡಿತ ಪ್ರದೇಶಗಳನ್ನು ಘೋಷಿಸುವಲ್ಲಿ ಯಾವುದೇ ವಿಳಂಬವಾಗಿಲ್ಲ. ಮುಂಗಾರು ಮತ್ತು ಹಿಂಗಾರು ಮಳೆ ಎರಡರಲ್ಲೂ ಕೊರತೆ ಇರುವವರೆಗೆ ಮೌಲ್ಯಮಾಪನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಮಾಡೋದಿಲ್ಲ

ನಿಜವಾಗಿ ನೋಡಿದರೆ ರಾಜ್ಯದ ಯಾವ ಜಿಲ್ಲೆಗಳಲ್ಲಿಯೂ ಹೆಚ್ಚು ಮಳೆ ಬಿದ್ದೇ ಇಲ್ಲ. ಇಡೀ ರಾಜ್ಯವೇ ಮಳೆಗಾಗಿ ಕಾದು ಕುಳಿತಿದೆ. ಯಾವ ತಾಲೂಕು ಬರಪೀಡಿತ ಯಾವ ತಾಲೂಕು ಬರಪೀಡಿತ ಅಲ್ಲ ಎಂದು ನಿರ್ಧರಿಸೋಕೆ ಪ್ರತ್ಯೇಕ ಮಾನದಂಡಗಳಿವೆ. ಅದರ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆಯೇ ಹೊರತು ಯಾರೋ ಒಬ್ಬ ವ್ಯಕ್ತಿ ಹೇಳಿದ್ದಕ್ಕೆ ಮಾಡುವುದಿಲ್ಲ. ಕೆಲವು ತಾಲೂಕುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದೀವಿ ಎನ್ನುವ ಮಾತು ಸುಳ್ಳು. ಯಾವುದೇ ಆಧಾರವಿಲ್ಲದೆ ಮಾತನಾಡುವುದನ್ನು ನಂಬೋಕೆ ಹೋಗಬೇಡಿ. ನಮಗೆ ಬೇಕಾದ ಹಾಗೆ ಲಿಸ್ಟ್‌ ಮಾಡಿದರೆ ಕೇಂದ್ರ ಪರಿಹಾರ ನೀಡೋದಿಲ್ಲ. ಮಾನದಂಡಗಳನ್ನು ಬಿಟ್ಟು ಆಚೀಚೆ ಬರೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !