ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯವು 2ನೇ ದಿನವೂ ಮುಂದುವರೆದಿದೆ. ಬುಧಾವರ ತಡರಾತ್ರಿಯವರೆಗೂ ತನಿಖೆ ನಡೆದಿದ್ದು, ಈ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕುಟುಂಬಸ್ಥರು, ಆಪ್ತರ ಮನೆಗಳಲೂ ಶೋಧ:
ಗೋಕಾಕ್ ನಗರದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಈ ವೇಳೆ ಅವರ ಪತ್ನಿ ಮತ್ತು ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮನೆಯಲ್ಲಿದ್ದರು. ಇದರೊಂದಿಗೆ ಬೆಳಗಾವಿಯಲ್ಲಿರುವ ಸಚಿವರ ಕುಟುಂಬದ ಸದಸ್ಯ ವೈ. ಮಂಜುನಾಥ್, ಆಪ್ತ ಗಿರೀಶ್ ಸೋನಾವಲ್ಕರ್ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಮಲಗೌಡ ಪಾಟೀಲ್ ಅವರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದು ರಾಜಕೀಯ ಪ್ರೇರಿತ ದಾಳಿ: ಸಿಎಂ ಗರಂ
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡಿ ದಾಳಿಗಳು ನಮಗೇನು ಹೊಸದಲ್ಲ. ಸತೀಶ್ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ಉದ್ಯಮ ಹಾಗೂ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ದಾಳಿಗಳಿಗೆ ನಮ್ಮ ನಾಯಕತ್ವ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಕೇಂದ್ರದ ಕೈಗೊಂಬೆಗಳು ‘ಇಡಿ-ಸಿಬಿಐ’: ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಳೆದ ಆರು ವರ್ಷಗಳಲ್ಲಿ ನಡೆದ ಶೇ. 97ರಷ್ಟು ದಾಳಿಗಳು ವಿರೋಧ ಪಕ್ಷದ ನಾಯಕರ ಮೇಲೆಯೇ ನಡೆದಿವೆ. 196 ದಾಳಿಗಳ ಪೈಕಿ ಕೇವಲ 2 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಅಂಕಿ-ಅಂಶಗಳನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಮುಂಬರುವ ಚುನಾವಣೆಯನ್ನು ತನ್ನ ನಾಯಕರನ್ನು ನಂಬಿ ಎದುರಿಸುತ್ತಿಲ್ಲ, ಬದಲಿಗೆ ಸಿಬಿಐ, ಐಟಿ ಮತ್ತು ಇಡಿ ಸಂಸ್ಥೆಗಳನ್ನು ನಂಬಿ ಎದುರಿಸಲು ಹೊರಟಿದೆ. ಈ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಯಲ್ಲಿರುವ ಕೈಗೊಂಬೆಗಳಂತೆ ವರ್ತಿಸುತ್ತಿವೆ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿರುವ ಈ ಇಡಿ ದಾಳಿಯ ಪ್ರಕ್ರಿಯೆಗಳು ಇನ್ನೂ ಮುಂದುವರಿದಿದೆ.



