September 9, 2026
Wednesday, September 9, 2026
spot_img

ಬಳ್ಳಾರಿ ಚಲೋ ಪಾದಯಾತ್ರೆ ಬ್ಯಾನರ್ ಅಳವಡಿಕೆಗೆ ಅಧಿಕಾರಿಗಳ ಅಡ್ಡಿ : ರಾಷ್ಟ್ರೀಯ ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹೊಸದಿಗಂತ ವರದಿ ಬಳ್ಳಾರಿ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಬ್ಯಾನರ್ ಅಳವಡಿಕೆಗೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ಕ್ರಮ ಖಂಡಿಸಿ ಬಿಜೆಪಿ ನೂರಾರು ಕಾರ್ಯಕರ್ತರು ಬಿಐಟಿಎಂ ಕಾಲೇಜು ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ ಸಂಜೆ ನಗರಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಾಯಕರ ಸ್ವಾಗತಕ್ಕೆ ಬ್ಯಾನರ್, ಕಟೌಟ್, ಬಿಜೆಪಿ ಧ್ವಜಗಳನ್ನು ಅಳವಡಿಸಲು ಮುಂದಾದರು. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಅಡ್ಡಿಪಡಿಸಿದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಕೆಎಂಎಫ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ರಾಷ್ಟ್ರೀಯ ಹೆದ್ದಾರಿ ತಡೆದು ಕಾಂಗ್ರೆಸ್ ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಕಾರ್ಯಕರ್ತರು ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಸ್ಪಿ ಡಾ. ಸುಮನ್ ಡಿ ಪೆನ್ನೇಕರ್, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಆಗಮಿಸಿ ಮನವೊಲಿಸಲು ಮುಂದಾದರು. ನಿಗಧಿತ ಸ್ಥಳದಲ್ಲಿ ಪರವಾನಿಗೆ ಪಡೆದು ಬ್ಯಾನರ್, ಬಂಟಿಂಗ್ಸ್, ಧ್ವಜ, ಕಟೌಟ್ ಗಳನ್ನು ಅಳವಡಿಸಲು ಮುಂದಾದರೆ, ಅಧಿಕಾರಿಗಳು ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ, ಜಿಲ್ಲೆಯ ಇಡೀ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ, ನಾವು ಯಾವತ್ತೂ ಶಾಂತಿ ಪ್ರಿಯರು, ನಮ್ಮನ್ನು ಕೆರಳಿಸಬೇಡಿ, ನಮ್ಮ ಬಿಜೆಪಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ನೀವ್ಯಾರು ಎಂದು ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತ ಮಂಜುನಾಥ ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು. ಅವರು ಅನುಮತಿ ನೀಡಿದ್ದಾರೆ ಎಂದು ಮಂಜುನಾಥ್ ಅವರು ಹೇಳಿದ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ಕೆಲಕಾಲ ಹೆದ್ದಾರಿಗಳಲ್ಲಿ ಲಾರಿ, ಬಸ್, ಸೇರಿದಂತೆ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ಪೊಲೀಸ್ ಅಧಿಕಾರಿಗಳು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೊತ್ಕರ, ಕೆ.ಹನುಮಂತು, ಗೋವಿಂದರಾಜಲು, ವೇಮಣ್ಣ ಮುಖಂಡರಾದ ಕೆ.ರಾಮಲಿಂಗಪ್ಪ, ಸುಗುಣ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರಿದ್ದರು. ಅಧಿಕಾರಿಗಳು ಬ್ಯಾನರ್ ಅಳವಡಿಕೆಗೆ ಅನುಮತಿ ನೀಡುತ್ತಿದ್ದಂತೆ, ಸೋಮಶೇಖರ ರೆಡ್ಡಿ ಅವರನ್ನೆತ್ತಿ ಕುಣಿದು ಕುಪ್ಪಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !