September 9, 2026
Wednesday, September 9, 2026
spot_img

ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಹಣ ಹೂಡಿದ್ರಾ ಸತೀಶ್‌ ಜಾರಕಿಹೊಳಿ? ಇಡಿ ದಾಳಿ ಮಾಡಿದ್ದು ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಮುಂಜಾನೆ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಹಾಗೂ ಅವಕಾರಿ ಇಲಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮದ ಆರೋಪಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಯಲಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಬರೋಬ್ಬರಿ 178 ಕೋಟಿ ರೂ.ಗೂ ಅಧಿಕ ಅಬಕಾರಿ ಅಕ್ರಮ ನಡೆದಿದೆ ಎನ್ನಲಾಗಿದೆ.

ಇದ್ದಕ್ಕಿದ್ದಂತೆಯೇ ಇಡಿ ದಾಳಿ ನಡೆಸಿದ್ದು ಯಾಕೆ?

ಸತೀಶ್‌ ಜಾರಕಿಹೊಳಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಆರೋಪಗಳು ಬಂದ ಹಿನ್ನೆಲೆ ಇಡಿ ತನಿಖೆ ತೀವ್ರಗೊಳಿಸಿದೆ. ಸತೀಶ್‌ ಜಾರಕಿಹೊಳಿ ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಕಾರಿಗೆ ವ್ಯವರಾಹದಲ್ಲಿ ಭಾರೀ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಆಫ್ರಿಕಾದಲ್ಲಿರುವ ಈ ಕಂಪನಿಗೆ ಪುತ್ರ ರಾಹುಲ್‌ ಜಾರಕಿಹೊಳಿ ಹಾಗೂ ಸತೀಶ್‌ ಸಹೋದರಿ ಲಕ್ಷ್ಮೀ ನಿರ್ದೇಶಕರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕುಟುಂಬದವರ ಹೆಸರಿನಲ್ಲಿ ಹಣ ಹೂಡಿಕೆ?

ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಹಣ ವರ್ಗಾವಣೆ ಮಾಡಿ, ಕುಟುಂಬಸ್ಥರ ಹೆಸರಿನಲ್ಲಿ ವಿದೇಶಿ ಕಂಪನಿಗಳನ್ನು ಹುಟ್ಟುಹಾಕಿರುವ ಹಣಕಾಸು ಜಾಲದ ಕುರಿತು ಇಡಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಇಡಿ ದಾಖಲೆ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ನೀಡುವ ವಿವರದಲ್ಲಿ ಈ ಹೂಡಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ಭಾವ ಮಂಜುನಾಥ್‌ನಿಂದ ಸಂಕಷ್ಟ

ಸತೀಶ್‌ ಜಾರಕಿಹೊಳಿ ಸಹೋದರಿಯ ಪತಿ ವೈ. ಮಂಜುನಾಥ್‌ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದಾರೆ. ಅವರ ಮನೆ ಹಾಗೂ ಕಚೇರಿ ಮೇಲೆ ಮೊದಲು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿ ಸಿಕ್ಕ ಸಣ್ಣ ಪುಟ್ಟ ಸುಳಿವುಗಳಿಂದ ಸತೀಶ್‌ ಜಾರಕಿಹೊಳಿಗೂ ಸಂಕಷ್ಟ ಆರಂಭವಾಗಿತ್ತು. ಬೇನಾಮಿ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮುಂಜಾನೆ 5.30 ಕ್ಕೆ ಏಕಕಾಲದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇದೀಗ ಆ ತನಿಖೆಯ ಮುಂದುವರಿದ ಭಾಗವಾಗಿ ಈ ದಾಳಿಯನ್ನು ನಡೆಸಲಾಗಿದೆ.

ಬೆಳಗಿನ ಜಾವ ನಾಲ್ಕು ಗಂಟೆಗೆ ಎರಡು ಪ್ರತ್ಯೇಕ ಕಾರುಗಳಲ್ಲಿ ಕುಳಿತು ಪ್ಲಾನಿಂಗ್‌ ನಡೆಸಿದ ನಂತರ ಬೆಳಗ್ಗೆ ಏಳು ಗಂಟೆಗೆ ಭದ್ರತಾ ಸಿಬ್ಬಂದಿ ಜತೆ ಏಕಕಾಲಕ್ಕೆ ಸತೀಶ್‌ ಜಾರಕಿಹೊಳಿ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !