September 9, 2026
Wednesday, September 9, 2026
spot_img

ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ ಪ್ರಕರಣ : ಕಲಬುರಗಿಯಲ್ಲಿ ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

ಹೊಸದಿಗಂತ ವರದಿ ಕಲಬುರಗಿ:

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬುಧವಾರ ಕಲಬುರಗಿಯಲ್ಲಿ ದಾಳಿ ನಡೆಸಿದ್ದಾರೆ.

ನಗರದ ನ್ಯೂ ಓಜಾ ಲೇಔಟ್‌ನಲ್ಲಿರುವ ಪಶುವೈದ್ಯಕೀಯ ನೇಮಕಾತಿ ಅಭ್ಯರ್ಥಿ ಮಮತಾ ಅವರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಕೆಪಿಎಸ್‌ಸಿ ಸದಸ್ಯೆಯಾಗಿದ್ದ ಶಾಂತಾ ಹೊಸಮನಿ ಅವರ ಹೆಸರು ಕೇಳಿಬಂದಿದ್ದು, ಅವರ ಮೂಲಕ ಡೀಲ್ ನಡೆಸಿ ಮಮತಾ ನೇಮಕಾತಿ ಪಡೆದಿರುವ ಆರೋಪದ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಮತಾ ಅವರ ನಿವಾಸದ ಮೇಲೆ ದಾಳಿ ನಡೆಸಿ ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿ ಸಂಗ್ರಹಿಸಲಾಗಿದೆ.

ಬೆಂಗಳೂರು ಸಿಐಡಿ ಘಟಕದ ಡಿವೈಎಸ್ಪಿ ಹಾಗೂ ಕಲಬುರಗಿ ಡಿವೈಎಸ್ಪಿ ಅಸ್ಲಾಂ ಪಾಷಾ ಅವರ ನೇತೃತ್ವದಲ್ಲಿ ಸುಮಾರು 20 ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತು. ಅಧಿಕಾರಿಗಳು ಹಲವು ಗಂಟೆಗಳ ಕಾಲ ಮನೆಯಲ್ಲಿ ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿರುವ ಸಾಧ್ಯತೆಯಿದೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ಹಂತಗಳಲ್ಲಿ ಸಿಐಡಿ ತನಿಖೆ ಮುಂದುವರಿದಿದೆ.

ಕಲಬುರಗಿಯಲ್ಲಿನ ಈ ದಾಳಿಯು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಈ ಕುರಿತು ಸಿಐಡಿ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !