September 9, 2026
Wednesday, September 9, 2026
spot_img

ರೂಲ್ಸ್‌ ಫಾಲೋ ಮಾಡ್ತಿಲ್ಲ! ಅಬಕಾರಿ ಸಚಿವರ ತವರಿನಲ್ಲೇ ಮದ್ಯಪಾನ ಪ್ರಿಯರಿಂದ ಪ್ರತಿಭಟನೆ

ಹೊಸದಿಗಂತ ವರದಿ ಹಾಸನ:

ಅಬಕಾರಿ ಇಲಾಖೆಗಳ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರ ತವರು ಜಿಲ್ಲೆಯಲ್ಲಿಯೇ ಮದ್ಯಪಾನ ಪ್ರಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನ ತಗರೆ ಗ್ರಾಮದಲ್ಲಿ ಪ್ರತಿಭಟನೆ ನಡೆದಿದೆ. ಇಲ್ಲಿ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡುತ್ತಿಲ್ಲ, ಅವರಿಗೆ ಯಾವ ದರ ಸೂಕ್ತವೋ ಆ ದರ ಹೇಳುತ್ತಾರೆ. ಹಣ ಕೊಡೋದಿಲ್ಲ ಎಂದರೆ ಬೇಡ ಎಂದು ಬಾಟಲಿಗಳನ್ನು ಎತ್ತಿಡುತ್ತಾರೆ ಎಂದು ದೂರಿದ್ದಾರೆ. ಪ್ರತಿಭಟನೆಯ ಕಾವು ಏರುತ್ತಿದ್ದಂತೆಯೇ ಅಬಕಾರಿ ಇಲಾಖೆಯ ಮಹಿಳಾ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸುವ ಯತ್ನ ಮಾಡಿದ್ದಾರೆ.

ವೈನ್‌ ಶಾಪ್‌ ಎದುರು ಶಾಮಿಯಾನ ಹಾಕಿ ಕುಳಿತು ಪ್ರತಿಭಟನೆಗೆ ಮುಂದಾಗಿರುವ ಮದ್ಯಪ್ರಿಯರು ಮಹಿಳಾ ಅಧಿಕಾರಿಗೆ ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ. ನೀವು ತಿಂಗಳಿಗೆ ಎರಡು ಬಾರಿ ಬಂದು ಹೋಗುತ್ತೀರಿ. ಆದರೆ ಅಂಗಡಿಯಲ್ಲಿ ಎಂಆರ್‌ಪಿಗಿಂತ ಅಧಿಕ ಹಣಕ್ಕೆ ಮದ್ಯ ಮಾರಾಟ ಮಾಡುವುದು ನಿಮಗೆ ಕಾಣಿಸಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಹಿಳಾ ಅಧಿಕಾರಿ ಸರಿಯಾದ ಪ್ರೂಫ್‌ ಸಮೇತ ದೂರು ನೀಡಿ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಭಟನಾಕಾರರು ಪ್ರತಿಯೊಂದಕ್ಕೂ ದೂರು ಕೊಡೋದಕ್ಕೆ ಆಗೋದಿಲ್ಲ. ಒಮ್ಮೆ ದೂರು ಕೊಡೋಕೆ ಬಂದರೆ ನಮಗೆ ಪರಿಹಾರ ಸಿಕ್ಕಿಬಿಡುತ್ತದಾ? ಹತ್ತಾರು ಬಾರಿ ನಮ್ಮನ್ನು ಅಲೆಸೋದಿಲ್ವಾ? ಮದ್ಯಪಾನ ಪ್ರಿಯರು ಇರುವ ಕಾರಣ ಸರ್ಕಾರದ ಖಜಾನೆ ತುಂಬುತ್ತಿದೆ ಎಂದಿದ್ದಾರೆ.

ಕಂಪ್ಯೂಟರ್‌ ಇಟ್ಟುಕೊಂಡು ಎಂಆರ್‌ಪಿ ಇನ್ನೇನೋ ತೋರಿಸಿ ನಮಗೆ ಮೋಸ ಮಾಡುತ್ತಿದ್ದೀರಿ. ಈಗಾಗಲೇ ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಮದ್ಯದ ಬೆಲೆಯೂ ಹೆಚ್ಚಾಗಿದೆ. ದೂರು ಕೊಡೋಕೆ ಹೇಳ್ತೀರಿ ಆದರೆ ನಿಜವಾಗಿಯೂ ನಮಗೆ ನ್ಯಾಯ ಸಿಗೋಕೆ ಎಷ್ಟು ಸಮಯ ಆಗಬಹುದು? ಪ್ರತೀ ಬ್ರ್ಯಾಂಡ್‌ಗೆ ಎಷ್ಟು ದರ ಎನ್ನುವುದನ್ನು ಹೇಳೋದಿಲ್ಲ. ನಾವು ಎಷ್ಟೂ ಅಂತ ಖರ್ಚು ಮಾಡೋದು? ನಮಗೆ ಉತ್ತರ ಸಿಗಬೇಕು, ನಮ್ಮ ಬೇಡಿಕೆಗಳು ಈಡೇರಬೇಕು. ಈಗಾಗಲೇ ಪ್ರತೀ ಮೀಡಿಯಾಗೂ ನಮ್ಮ ಸಮಸ್ಯೆಯನ್ನು ತೋರಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಠಾವಧಿ ಧರಣಿ ಕೂರುತ್ತೇವೆ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ಮಾತಿಗೆ ಹೈರಾಣಾದ ಅಧಿಕಾರಿ ಕೆಲ ಸಮಯದ ನಂತರ ವಾಪಾಸ್‌ ಹೊರಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !