September 9, 2026
Wednesday, September 9, 2026
spot_img

ಪರದೆಯ ಮೇಲೆ ನಗಿಸೋ ನಟನಿಗೆ ನಿಜ ಜೀವನದಲ್ಲಿ ಕಣ್ಣೀರು: ಸುಪ್ರೀಂ ಕೊಟ್ಟ ಆ ಒಂದು ಷರತ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಕ್ರೀನ್ ಮೇಲೆ ಬಂದರೆ ಸಾಕು, ಯಾವುದೇ ಡೈಲಾಗ್ ಇಲ್ಲದೇ ಬರೀ ಮುಖದ ಎಕ್ಸ್‌ಪ್ರೆಷನ್‌ನಲ್ಲೇ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸೋ ತಾಕತ್ತು ಇರೋ ನಟ ಅಂದರೆ ಅದು ರಾಜ್‌ಪಾಲ್ ಯಾದವ್. ಆದರೆ, ಸಿನಿಮಾ ಪರದೆ ಮೇಲೆ ಎಲ್ಲರನ್ನೂ ನಗಿಸೋ ಈ ‘ಕಾಮಿಡಿ ಕಿಂಗ್’ ರಿಯಲ್ ಲೈಫ್‌ನಲ್ಲಿ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಕಾರಣ ಮತ್ತೇನೂ ಅಲ್ಲ… ಅದೇ ಸಾಲದ ಶೂಲ ಮತ್ತು ಚೆಕ್ ಬೌನ್ಸ್ ಕೇಸ್.

ಕಥೆ ಏನು ಅಂದರೆ, ನಟ ರಾಜ್‌ಪಾಲ್ ಯಾದವ್ ಮತ್ತು ಅವರ ಪತ್ನಿ ರಾಧಾ ಯಾದವ್ ‘ಮುರಳಿ ಪ್ರಾಜೆಕ್ಟ್ಸ್’ ಅನ್ನೋ ಕಂಪನಿಯಿಂದ ಸಿನಿಮಾ ಮಾಡಲು ಭಾರಿ ಮೊತ್ತದ ಸಾಲ ತಗೊಂಡಿದ್ದರು. ಆದರೆ, ಟೈಮ್‌ಗೆ ಸರಿಯಾಗಿ ಹಣ ವಾಪಸ್ ಕೊಡೋಕೆ ಆಗಲಿಲ್ಲ. ಕೊಟ್ಟ ಚೆಕ್‌ಗಳೆಲ್ಲಾ ಸಾಲಾಗಿ ‘ಬೌನ್ಸ್’ ಆಗಿ ಹೋದವು. ಇದರಿಂದ ಕೋಪಗೊಂಡ ಕಂಪನಿ ನಟನ ವಿರುದ್ಧ ಒಂದಲ್ಲ, ಎರಡಲ್ಲ… ಸಾಲು ಸಾಲು ಚೆಕ್ ಬೌನ್ಸ್ ಕೇಸ್‌ಗಳನ್ನು ಹಾಕಿಬಿಡ್ತು.

ಈ ಹಿಂದೆ ಹೈಕೋರ್ಟ್ ಈ ಕೇಸ್‌ನಲ್ಲಿ ನಟನಿಗೆ ಶಿಕ್ಷೆಯನ್ನೇ ವಿಧಿಸಿತ್ತು. ಸುಮಾರು 7 ಕೇಸ್‌ಗಳಲ್ಲಿ ಪ್ರತಿಯೊಂದಕ್ಕೂ ತಲಾ 1.05 ಕೋಟಿ ರೂಪಾಯಿ ದೂರುದಾರರಿಗೆ ನೀಡಬೇಕು, ಜೊತೆಗೆ ರಾಜ್ಯ ಸರ್ಕಾರಕ್ಕೂ ದಂಡ ಕಟ್ಟಬೇಕು ಎಂದು ಆರ್ಡರ್ ಮಾಡಿತ್ತು. ಇತ್ತ ನಟ ಈಗಾಗಲೇ 2.25 ಕೋಟಿ ರೂಪಾಯಿ ಪಾವತಿಸಿದ್ದರಿಂದ ಅದನ್ನು ಕಳೆದು ಬಾಕಿ ಚುಕ್ತ ಮಾಡಲು ತಿಳಿಸಲಾಗಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಲು ಎರಡು ತಿಂಗಳು ಟೈಮ್ ಕೊಟ್ಟಿದ್ದರಿಂದ ನಟ ಸದ್ಯಕ್ಕೆ ಜೈಲಿನಿಂದ ಹೊರಗಿದ್ದರು.

ಈಗ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ. ಸುಪ್ರೀಂ ಕೋರ್ಟ್ ನಟನಿಗೆ ‘ಮಧ್ಯಂತರ ಜಾಮೀನು’ ನೀಡಿ ಸದ್ಯಕ್ಕೆ ಜೈಲು ಶಿಕ್ಷೆಯಿಂದ ದೊಡ್ಡ ರಿಲೀಫ್ ಕೊಟ್ಟಿದೆ.

ಆದರೆ ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ. ಸುಪ್ರೀಂ ಕೋರ್ಟ್ ಒಂದು ಖಡಕ್ ಷರತ್ತು ಹಾಕಿದೆ. ನಟ ರಾಜ್‌ಪಾಲ್ ಯಾದವ್ ಅವರು ಬುಧವಾರದ ಒಳಗಾಗಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ 5 ಕೋಟಿ ರೂಪಾಯಿ ಠೇವಣಿ ಇಡಬೇಕು. ಈ ದೊಡ್ಡ ಮೊತ್ತದ ಹಣವನ್ನು ಕೋರ್ಟ್‌ಗೆ ಕಟ್ಟಿದರೆ ಮಾತ್ರ ಜೈಲಿನಿಂದ ಬಚಾವ್, ಇಲ್ಲಾ ಅಂದರೆ ಕಷ್ಟ.

ಸ್ಕ್ರೀನ್ ಮೇಲೆ ಕೋಟ್ಯಂತರ ಜನರನ್ನು ನಗಿಸೋ ನಟನಿಗೆ ಈಗ 5 ಕೋಟಿ ರೂಪಾಯಿ ತಕ್ಷಣಕ್ಕೆ ಹೊಂದಿಸುವುದು ಅಷ್ಟು ಸುಲಭದ ಮಾತಲ್ಲ. ಸದ್ಯಕ್ಕಂತೂ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಕ್ಕಿ ಜೈಲು ಶಿಕ್ಷೆಯಿಂದ ತಾತ್ಕಾಲಿಕವಾಗಿ ಪಾರಾಗಿದ್ದರೂ, ಬುಧವಾರದೊಳಗೆ ಈ 5 ಕೋಟಿ ರೆಡಿ ಮಾಡೋದು ನಟನಿಗೆ ನಿಜಕ್ಕೂ ದೊಡ್ಡ ತಲೆನೋವಾಗಿದೆ. ರಾಜ್‌ಪಾಲ್ ಯಾದವ್ ಈ ಹಣವನ್ನು ಕಟ್ಟಿ ಪಾರಾಗ್ತಾರಾ ಅಥವಾ ಮತ್ತೆ ಜೈಲಿನ ಕಂಬಿ ಎಣಿಸ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !