ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರಿನ ಬಾಟಲಿಯೊಂದರ ಮೇಲೆ ಹಾಕಿದ್ದ MRPಗಿಂತ ಏಳು ರೂಪಾಯಿ ಹೆಚ್ಚಿಗೆ ಪಡೆದ ಅಂಗಡಿ ಮಾಲೀಕನಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಅಂಗಡಿ ಮಾಲೀಕರು ಕೆಲವೊಮ್ಮೆ ಎಮ್ಆರ್ಪಿಗಿಂತ ಹೆಚ್ಚು ಹಣವನ್ನು ಪಡೆದುಕೊಳ್ಳುತ್ತಾರೆ. ಗ್ರಾಹಕರು ಇದನ್ನು ಪ್ರಶ್ನೆ ಮಾಡುವುದಿಲ್ಲ. ಮಾಡಿದರೂ ಇಲ್ಲಿ ಎಲ್ಲ ಅಂಗಡಿಯಲ್ಲೂ ಹೀಗೆ ಮಾರಾಟ ಮಾಡುವುದು ಎಂದು ಹೇಳಿಬಿಡುತ್ತಾರೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿರುವ ಅನ್ನವರಂ ದೇವಾಲಯದ ಆವರಣದಲ್ಲಿದ್ದ ಅಂಗಡಿಯೊಂದು ಒಂದು ಲೀಟರ್ ನೀರಿನ ಬಾಟಲಿಗೆ ಎಮ್ಆರ್ಪಿಗಿಂತ ಹೆಚ್ಚು ಹಣ ಪಡೆದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀರಿನ ಬಾಟಲಿ ಮೇಲೆ 18 ರೂಪಾಯಿ ಎಂದು ಬರೆದಿತ್ತು. ಆದರೆ ಅಂಗಡಿಯಾತ 25 ರೂ. ಪಡೆದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ನೀಡಿದ್ದರು. ಹೀಗಾಗಿ ಗ್ರಾಹಕರ ಆಯೋಗಕ್ಕೆ ದೂರು ನೀಡಲಾಗಿತ್ತು. ಕಾಕಿನಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಂಗಡಿ ಮಾಲೀಕನಿಗೆ ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಗ್ರಾಹಕರ ಆಯೋಗದ ಮೊರೆ ಹೋಗುವ ಮುನ್ನ ವ್ಯಕ್ತಿಯು ಸಾಕ್ಷಿ ಸಮೇತ ಅನ್ನವರಂ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ದೇವಸ್ಥಾನದ ಮಂಡಳಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಇದರಿಂದ ಸಿಟ್ಟಾದ ಗ್ರಾಹಕರು ಆಯೋಗದ ಮೊರೆ ಹೋಗಿ ಲಕ್ಷ ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾರೆ.
ಹೆಚ್ಚುವರಿ ತೆಗೆದುಕೊಂಡ ಏಳು ರೂಪಾಯಿ, ಮಾನಸಿಕ ವೇದನೆಗಾಗಿ ಹತ್ತು ಸಾವಿರ ರೂಪಾಯಿ, ಕಾನೂನು ಹೋರಾಟದ ವೆಚ್ಚ ಐದು ಸಾವಿರರೂಪಾಯಿ ಹಾಗೂ ಗ್ರಾಹಕ ಕಲ್ಯಾಣ ನಿಧಿಗೆ ಏಳು ಲಕ್ಷ ರೂಪಾಯಿ ಪಾವತಿ ಮಾಡುವಂತೆ ಹೇಳಿದೆ.



