ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ತೆರೆಗೆ ಬರಲು ಇನ್ನು ಕೇವಲ 10 ದಿನಗಳು ಬಾಕಿ ಇವೆ. ಆದರೆ, ಚಿತ್ರಮಂದಿರಗಳ ಟಿಕೆಟ್ ಕೌಂಟರ್‌ನಲ್ಲಿ ಈಗಲೇ ಹಣದ ಮಳೆ ಶುರುವಾಗಿದೆ. ಕೆಲವೇ ದಿನಗಳ ಹಿಂದೆ ಆರಂಭವಾದ ಮುಂಗಡ ಟಿಕೆಟ್ ಬುಕಿಂಗ್ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ಪಡೆದುಕೊಂಡಿದೆ.
ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ಈವರೆಗೂ 1,75,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇದರಲ್ಲಿ ಮೊದಲ ದಿನದ ಪ್ರದರ್ಶನಕ್ಕಾಗಿಯೇ ಬರೋಬ್ಬರಿ 90,000 ಟಿಕೆಟ್‌ಗಳು ಮಾರಾಟವಾಗಿರುವುದು ವಿಶೇಷ. ಈ ಅಂಕಿ-ಅಂಶಗಳು ಕೇವಲ ಹಿಂದಿ ಆವೃತ್ತಿಗೆ ಮಾತ್ರ ಸೀಮಿತವಾಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳ ಟಿಕೆಟ್ ಸೇರಿಸಿದರೆ ಒಟ್ಟು ಮಾರಾಟ 2 ಲಕ್ಷದ ಗಡಿ ತಲುಪಿದೆ.
ಕೇವಲ ಮಲ್ಟಿಪ್ಲೆಕ್ಸ್‌ಗಳಷ್ಟೇ ಅಲ್ಲದೆ, ಇತರ ಥಿಯೇಟರ್‌ಗಳು ಹಾಗೂ ದಕ್ಷಿಣ ಭಾರತದ ಸಿಂಗಲ್ ಸ್ಕ್ರೀನ್‌ಗಳಲ್ಲೂ ಮುಂಗಡ ಬುಕಿಂಗ್ ಭರದಿಂದ ಸಾಗಿದೆ. ಮೊದಲ ವಾರಾಂತ್ಯಕ್ಕೆ ಹಿಂದಿ ಆವೃತ್ತಿಯ ಒಂದರಲ್ಲೇ ಬರೋಬ್ಬರಿ 10 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆಯಾಗಿದೆ.
ಸಾಮಾನ್ಯವಾಗಿ ಭಾರತೀಯ ಸಿನಿಮಾಗಳು ಇಷ್ಟು ಬೇಗ ಮುಂಗಡ ಬುಕಿಂಗ್ ಓಪನ್ ಮಾಡುವುದಿಲ್ಲ. ಈ ಹಿಂದೆ ‘ಧುರಂಧರ್: ದಿ ರಿವೇಂಜ್’ ಸಿನಿಮಾ 11 ದಿನಗಳ ಮುಂಚಿತವಾಗಿ ಪ್ರೀವಿವ್‌ಗಳಿಗಾಗಿ ಬುಕಿಂಗ್ ತೆರೆದು, ಮೊದಲ ಎರಡು ದಿನಗಳಲ್ಲಿ 1,35,000 ಟಿಕೆಟ್ ಮಾರಾಟ ಮಾಡಿತ್ತು. ಆದರೆ ‘ರಾಮಾಯಣ’ ಈಗ ಆ ದಾಖಲೆಯನ್ನು ಸುಲಭವಾಗಿ ಮೆಟ್ಟಿ ನಿಂತಿದೆ.
ಸಿನಿಮಾ ರಂಗದ ಲೆಕ್ಕಾಚಾರದ ಪ್ರಕಾರ, ಬಿಡುಗಡೆಯ ವಾರದ ಸೋಮವಾರದಿಂದ ಕೊನೆಯ ದಿನದವರೆಗಿನ ಬುಕಿಂಗ್ ಅತ್ಯಂತ ನಿರ್ಣಾಯಕವಾಗಿರುತ್ತದೆ. ಪ್ರಸ್ತುತ ಶುಭಾರಂಭ ಕಂಡಿರುವ ‘ರಾಮಾಯಣ’, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.



