ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಆಫ್ರಿಕಾ ಟಿ20 (SA20) ಟೂರ್ನಿ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ, ಜೊಬರ್ಗ್ ಸೂಪರ್ ಕಿಂಗ್ಸ್ (JSK) ತಂಡಕ್ಕೆ ದೊಡ್ಡ ಮಟ್ಟದ ಆಘಾತ ಎದುರಾಗಿದೆ. ವೆಸ್ಟ್ ಇಂಡೀಸ್ನ ದೈತ್ಯ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರು ಮುಂಬರುವ ಸೀಸನ್ನಿಂದ ದಿಢೀರನೆ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚೆಗೆ ನಡೆದ SA20 ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೊಬರ್ಗ್ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಕೀರನ್ ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ಸ್ ನೀಡಿ ಖರೀದಿ ಮಾಡಿತ್ತು. ಕಳೆದ ಆವೃತ್ತಿಗಳಲ್ಲಿ ಎಂಐ ಕೇಪ್ ಟೌನ್ ಪರ ಆಡಿದ್ದ ಪೊಲಾರ್ಡ್ ಅವರನ್ನು ಈ ಬಾರಿ ಹರಾಜಿಗೂ ಮುನ್ನ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಸಿಎಸ್ಕೆ ಫ್ರಾಂಚೈಸಿ ಒಡೆತನದ ಜರ್ಸಿಯಲ್ಲಿ ಪೊಲಾರ್ಡ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈಗ ಆ ಆಸೆಗೆ ತಣ್ಣೀರೆರಚಿದಂತಾಗಿದೆ.
ಕೀರನ್ ಪೊಲಾರ್ಡ್ ಟೂರ್ನಿಯಿಂದ ಹೊರಗುಳಿದಿರುವ ಸುದ್ದಿಯನ್ನು ಸಿಎಸ್ಕೆ ಮತ್ತು ಅದರ ಜಾಗತಿಕ ಫ್ರಾಂಚೈಸಿಗಳ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ. “ಪೊಲಾರ್ಡ್ ಅವರು ಈ ಬಾರಿ ಜೊಬರ್ಗ್ ಸೂಪರ್ ಕಿಂಗ್ಸ್ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ಅವರ ಸ್ಥಾನಕ್ಕೆ ಸೂಕ್ತ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದ್ದೇವೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ತಂಡವು ಕೀರನ್ ಪೊಲಾರ್ಡ್ ಅವರನ್ನು ಮುಂಬರುವ ಐಪಿಎಲ್ 2027 ಸೀಸನ್ಗಾಗಿ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಮುಂಬೈ ಫ್ರಾಂಚೈಸಿಯೊಂದಿಗೆ ಸುದೀರ್ಘ ಸಂಬಂಧ ಹೊಂದಿರುವ ಪೊಲಾರ್ಡ್, ಈ ಕೋಚಿಂಗ್ ಜವಾಬ್ದಾರಿಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಐಪಿಎಲ್ ಮಿನಿ ಹರಾಜು, ಆಟಗಾರರ ರಿಟೆನ್ಷನ್ ಮತ್ತು ತಂಡದ ಕಾರ್ಯತಂತ್ರ ರೂಪಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ, ಸೌತ್ ಆಫ್ರಿಕಾದಲ್ಲಿ ಆಡಲು ಸಮಯ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ, ಪೊಲಾರ್ಡ್ ಅಲಭ್ಯತೆಯು ಜೊಬರ್ಗ್ ಸೂಪರ್ ಕಿಂಗ್ಸ್ ತಂಡದ ಯೋಜನೆಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಅವರ ಬದಲಿ ಆಟಗಾರ ಯಾರು ಎಂಬ ಕುತೂಹಲ ಮೂಡಿದೆ.



