ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಯ್ ದೇವಗನ್ ಎಂದ ತಕ್ಷಣ ನೆನಪಾಗೋದು ಆ ‘ಕೇಬಲ್ ನೆಟ್ವರ್ಕ್’ ನಡೆಸೋ ಸೈಲೆಂಟ್ ಕಿಲಾಡಿ ವಿಜಯ್ ಸಲ್ಗಾಂವ್ಕರ್. ಹಳೆ ಕಥೆಗಳನ್ನೆಲ್ಲ ನೆನಪು ಮಾಡ್ಕೊಂಡ್ರೆ ಈಗಲೂ ಮೈ ಜುಮ್ ಅನ್ನುತ್ತೆ. ಈಗ ಈ ರೋಮಾಂಚನಕಾರಿ ಕಥೆಗೆ ಅಂತಿಮ ಟಚ್ ಕೊಡೋಕೆ ‘ದೃಶ್ಯಂ 3: ದಿ ಕನ್ಕ್ಲೂಷನ್’ ಥಿಯೇಟರ್ಗೆ ಬರೋಕೆ ಡೇಟ್ ಫಿಕ್ಸ್ ಮಾಡ್ಕೊಂಡಿದೆ. ಅಕ್ಟೋಬರ್ 2, 2026ರ ಗಾಂಧಿ ಜಯಂತಿಯಂದೇ ಈ ಮಾಸ್ಟರ್ಪೀಸ್ ಸಿನಿಮಾ ದೊಡ್ಡ ಪರದೆ ಮೇಲೆ ಅಪ್ಪಳಿಸಲಿದೆ.
ಅಭಿಷೇಕ್ ಪಠಾಕ್ ನಿರ್ದೇಶನ ಮಾಡಿರೋ ಈ ಪಾರ್ಟ್ 3 ಟ್ರೇಲರ್ ರಿಲೀಸ್ ಆಗಿ ಧೂಳೆಬ್ಬಿಸ್ತಿದೆ. ಕೇವಲ 2 ನಿಮಿಷ 49 ಸೆಕೆಂಡ್ ಇರೋ ಈ ಟ್ರೇಲರ್ ನೋಡಿದ್ರೆ ಎಂಥವರಿಗೂ ಗೂಸ್ಬಂಪ್ಸ್ ಬರೋದು ಗ್ಯಾರಂಟಿ. ಮೊದಲನೇ ಪಾರ್ಟ್ನಲ್ಲಿ ಮಗ ಸ್ಯಾಮ್ನ ಕಳೆದುಕೊಂಡ ಮೀರಾ ದೇಶ್ಮುಖ್, ಇನ್ನು ಆ ನೋವಿನಿಂದ ಆಚೆ ಬಂದಿಲ್ಲ. ಮಗನ ಸಾವಿಗೆ ಸೇಡು ತೀರಿಸ್ಕೊಬೇಕು ಎಂದು ಹಠ ಹಿಡಿದು ಕುಳಿತಿದ್ದಾರೆ.
ಇತ್ತ ಕಡೆ ನಮ್ ವಿಜಯ್ ಸಲ್ಗಾಂವ್ಕರ್ ಎರಡನೇ ಪಾರ್ಟ್ನಲ್ಲಿ ಹೇಗೋ ಪಾರಾಗಿದ್ದರೂ, ಭೂಮಿಯಲ್ಲಿ ಹೂತುಹಾಕಿರೋ ರಹಸ್ಯ ಮಾತ್ರ ಅವನ ಬೆನ್ನತ್ತಿ ಬರ್ತಾನೇ ಇದೆ. ತಾನು ಎಷ್ಟು ಮುಚ್ಚಿಡೋಕೆ ನೋಡಿದ್ರೂ, ಪೋಲಿಸರು ಮತ್ತೆ ಆ ಸತ್ಯದ ಹತ್ತಿರಕ್ಕೆ ಹೋಗ್ತಿದ್ದಾರೆ. ಈ ಸಲ ವಿಜಯ್ ಬರೀ ತನ್ನನ್ನಷ್ಟೇ ಅಲ್ಲ, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ತನ್ನ ಹೆಂಡ್ತಿ-ಮಕ್ಕಳನ್ನ ಹೆಂಗೆ ಕಾಪಾಡ್ಕೋತಾನೆ ಅನ್ನೋದೇ ಅಸಲಿ ಕಥೆ.
ಪ್ರತಿಯೊಂದು ಸೀನ್ನಲ್ಲೂ ಉಸಿರು ಬಿಗಿಹಿಡಿದು ನೋಡೋ ಹಾಗೆ ಪ್ಲಾನ್ ಮಾಡಿದ್ದಾರೆ. ‘ದೃಶ್ಯಂ’ ಅಂದ್ರೇನೆ ಬುದ್ಧಿವಂತಿಕೆ ಮತ್ತು ಫ್ಯಾಮಿಲಿ ಎಮೋಷನ್. ಈ ಕೊನೆಯ ಭಾಗದಲ್ಲಿ ವಿಜಯ್ ತನ್ನ ಹಳೆ ಎಂಟನೇ ತರಗತಿ ತಲೆಯನ್ನ ಉಪಯೋಗಿಸಿ ಪೋಲಿಸರಿಗೆ ಮತ್ತೆ ಚೋಂಬು ಕೊಡ್ತಾನಾ ಅನ್ನೋದನ್ನ ನೋಡೋಕೆ ಸಿನಿಪ್ರಿಯರು ಕಾಯ್ತಿದ್ದಾರೆ. ಅಕ್ಟೋಬರ್ 2ಕ್ಕೆ ಸಲ್ಗಾಂವ್ಕರ್ ಫ್ಯಾಮಿಲಿಯ ಅಸಲಿ ಆಟ ಥಿಯೇಟರ್ನಲ್ಲಿ ನೋಡೋಕೆ ರೆಡಿಯಾಗಿ.



