ಹೊಸದಿಗಂತ ವರದಿ ಕಲಬುರಗಿ:
ಭಾರತ ಜಗದ ಜನನಿಯಾಗಬೇಕು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯವಾಗಿದೆ. ಈ ಗುರಿ ಸಾಕಾರಗೊಳಿಸಲು ಜಾತಿ, ಕುಲ, ಬಡವ–ಶ್ರೀಮಂತ ಎಂಬ ಭೇದ ಮರೆತು ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿ ಮತ್ತು ಸಮಾಜದ ಏಕತೆಗಾಗಿ ಶ್ರಮಿಸಬೇಕು ಎಂದು ಆರೆಸ್ಸೆಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತದ ಅನುಮತಿಯಂತೆ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಡೆಯಿತು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಹೊರಟ ಪಥಸಂಚಲನ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಪುನಃ ಕಲ್ಯಾಣ ಮಂಟಪದ ಆವರಣದಲ್ಲಿ ಸಮಾರೋಪಗೊಂಡಿತು. ಬಳಿಕ ನಡೆದ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ರಾಮಚಂದ್ರ ಏಡಕೆ, ಸಂಘದ ಶಾಖೆ ಬಯಲು ವಿಶ್ವವಿದ್ಯಾಲಯವಿದ್ದಂತೆ. ಇಲ್ಲಿ ಜಾತಿ, ಕುಲ, ಶ್ರೀಮಂತ, ಬಡವ ಎಂಬ ಯಾವುದೇ ಭೇದವಿಲ್ಲ. ಯಾರು ಬೇಕಾದರೂ ಶಾಖೆಗೆ ಬಂದು ದೇಶಭಕ್ತಿ, ಶಿಸ್ತು ಮತ್ತು ಸಂಘಟನೆಯ ಗುಣಗಳನ್ನು ಕಲಿಯಬಹುದು ಎಂದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರದ ಕುರಿತು ಪ್ರಶ್ನಿಸುವವರು ಸಂಘದ ಇತಿಹಾಸವನ್ನು ಪರಿಶೀಲಿಸಬೇಕು. ವಂದೇ ಮಾತರಂ ಯಾವುದೇ ರಾಜಕೀಯ ಪಕ್ಷದ ಗೀತೆಯಲ್ಲ, ಅದು ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ ಎಂದು ಹೇಳಿದರು.
ಕನ್ನಡ ಭಾಷೆಯ ಶ್ರೀಮಂತಿಕೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಮ್ಮಿ, ಡ್ಯಾಡಿ ಬದಲಿಗೆ ಅಮ್ಮ, ಅಪ್ಪ ಹಾಗೂ ಗುಡ್ ಮಾರ್ನಿಂಗ್ ಬದಲಿಗೆ ಶುಭೋದಯ ಎಂಬ ಕನ್ನಡ ಪದಗಳನ್ನು ಬಳಸಬೇಕು ಎಂದು ಕರೆ ನೀಡಿದರು.

ರಾಜಶೇಖರ ಯಾದ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ಪಾಟೀಲ್, ವಿಜಯ ಮಾಹಾಂತೇಶ, ಸಂತೋಷ್ ಹಾವೇರಿ, ಪ್ರಹ್ಲಾದ್ ವಿಶ್ವಕರ್ಮ, ಅಶೋಕ ಬಗಲಿ, ಬಸವರಾಜ ಬೆಣ್ಣೂರ ಉಪಸ್ಥಿತರಿದ್ದರು.
ಜೆಸಿಬಿಯಿಂದ ಪುಷ್ಪವೃಷ್ಟಿ:
ಪಥಸಂಚಲನದಲ್ಲಿ 350ಕ್ಕೂ ಅಧಿಕ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಸಾರ್ವಜನಿಕರು ಹೂಮಳೆ ಸುರಿಸಿ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಿದರು. ಪುಟಾಣಿ ಮಕ್ಕಳು ಮಹಾಪುರುಷರ ವೇಷದಲ್ಲಿ ಸ್ವಾಗತ ಕೋರಿದರು. ಜೆಸಿಬಿ ಮೂಲಕವೂ ಪುಷ್ಪವೃಷ್ಟಿ ಮಾಡಲಾಯಿತು.



