October 31, 2026
Saturday, October 31, 2026
spot_img

ಮುಂಡಗೋಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಮರವೇರಿ ಪ್ರಾಣ ಉಳಿಸಿಕೊಂಡ ವ್ಯಕ್ತಿ

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ನ್ಯಾಸರ್ಗಿ–ದುಂಡಸಿ ಮಾರ್ಗ ಮಧ್ಯೆ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಭೀಕರ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಗುರುರಾಜ ಗುತ್ತೆಪ್ಪನವರ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:

ಪಟ್ಟಣದ ಗುರುರಾಜ ಅವರು ಶುಕ್ರವಾರ ನ್ಯಾಸರ್ಗಿ ಸಮೀಪವಿರುವ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ಗದ್ದೆಗೆ ನೀರು ಬಿಟ್ಟು ರಾತ್ರಿ ಸುಮಾರು 9.20ರ ಸುಮಾರಿಗೆ ಮರಳಿ ಬರುತ್ತಿದ್ದಾಗ, ನ್ಯಾಸರ್ಗಿ ಬಸಪ್ಪನ ಗುಡಿ ಬಳಿಯ ರಸ್ತೆ ಪಕ್ಕದಲ್ಲಿದ್ದ ಚಿರತೆಯೊಂದು ಇವರ ಮೇಲೆ ಏಕಾಏಕಿ ಎರಗಲು ಯತ್ನಿಸಿದೆ. ಇದರಿಂದ ಗಾಬರಿಗೊಂಡ ಗುರುರಾಜ ಅವರು ತಕ್ಷಣವೇ ತಂತಿ ಬೇಲಿ ದಾಟಿ ಓಡಿ, ಸಮೀಪದಲ್ಲಿದ್ದ ಮರವನ್ನು ಹತ್ತಿ ಕುಳಿತು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಮರದಲ್ಲೇ ಕುಳಿತು ಪೊಲೀಸರಿಗೆ ಕರೆ:ಚಿರತೆ ಭಯದಿಂದ ಮರವೇರಿದ್ದ ಗುರುರಾಜ ಅವರು ಗಟ್ಟಿಯಾಗಿ ಕೂಗಾಡಿದರೂ ನಿರ್ಜನ ಪ್ರದೇಶವಾಗಿದ್ದರಿಂದ ಯಾರೂ ನೆರವಿಗೆ ಬರಲಿಲ್ಲ. ತಕ್ಷಣವೇ ಚಾಕಚಕ್ಯತೆ ಮೆರೆದ ಅವರು ಮುಂಡಗೋಡ ಪಿಎಸ್‌ಐ ಮಂಜುನಾಥ ಗೌಡರ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿದ ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಮಂಜುನಾಥ ಗೌಡರ, ಮರದಲ್ಲಿದ್ದ ಗುರುರಾಜ್ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ಧೈರ್ಯ ತುಂಬಿ ಕರೆದುಕೊಂಡು ಬಂದಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಗುರುರಾಜ್ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಭೀಕರ ಅನುಭವ ಹಂಚಿಕೊಂಡಿದ್ದು, “ನ್ಯಾಸರ್ಗಿ ಬಸಪ್ಪನ ಗುಡಿ ಬಳಿ ಚಿರತೆ ನನ್ನ ಮೇಲೆ ಎರಗಲು ಬಂದಾಗ ತಂತಿ ಬೇಲಿ ಹತ್ತಿ ಮರವೇರಿ ಪ್ರಾಣ ಉಳಿಸಿಕೊಂಡೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ ಮರದಿಂದ ಕೆಳಗಿಳಿಸಿ ರಕ್ಷಿಸಿದ ಪಿಎಸ್‌ಐ ಮಂಜುನಾಥ ಗೌಡರ ಸರ್ ಅವರಿಗೆ ಕೋಟಿ ಕೋಟಿ ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನ್ಯಾಸರ್ಗಿ, ಕುಂದರ್ಗಿ, ವ್ಯಾಪ್ತಿಯ ಜನರಿಗೆ ಚಿರತೆ ಕುರಿತು ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಈ ಹಿಂದೆ ಇದೇ ನ್ಯಾಸರ್ಗಿ ಪ್ಲಾಟ್ ದಾಟಿದ ಕೆಲವೇ ದೂರದಲ್ಲಿ ಬೈಕ್ ಸವಾರನೊಬ್ಬ ಸಂಚರಿಸುತ್ತಿದ್ದಾಗ ಏಕಾಏಕಿ ಚಿರತೆ ಆತನತ್ತ ಹಾರಿತ್ತು. ಅದೇ ಸಮಯದಲ್ಲಿ ಹಿಂದಿನಿಂದ ಬಂದ ಲಾರಿ ಚಾಲಕ ಸತತ ಹಾರ್ನ್ ಮಾಡಿದ್ದರಿಂದ ಚಿರತೆ ಕಾಡಿನತ್ತ ಓಡಿಹೋಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.

ಪಟ್ಟಣದಿಂದ ಕೇವಲ ಎರಡ್ಮೂರು ಕಿ.ಮೀ. ದೂರದಲ್ಲಿರುವ ನ್ಯಾಸರ್ಗಿ ಅರಣ್ಯ ಪ್ರದೇಶದ ಅಂಚಿನಲ್ಲೇ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಗೌಳಿದಡ್ಡಿ ಹಾಗೂ ದುಂಡಸಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ವಿಶೇಷವಾಗಿ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ಅರಣ್ಯ ಇಲಾಖೆ ತಕ್ಷಣವೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಕೆಡವಿ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Must Read

Skip to toolbar