September 9, 2026
Wednesday, September 9, 2026
spot_img

ಮುಂದಿನ ಚುನಾವಣೆಯಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತಿದ್ದು, ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ದೊರೆಯುತ್ತಿರುವ ಅಪಾರ ಜನರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ಚುನಾವಣೆಯಲ್ಲಿ ಜನವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ, ಬಡವರ, ರೈತರ, ಮಹಿಳೆಯರ ಪರ ಮತ್ತೊಮ್ಮೆ ಕೆಲಸ ಮಾಡಲು ಬಿಜೆಪಿಗೆ ಅವಕಾಶ ಕಲ್ಪಿಸೋಣ, ಚುನಾವಣೆಯಲ್ಲಿ ಆಶೀರ್ವದಿಸೋಣ ಎಂದು ರಾಜ್ಯದ ಜನತೆ ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ನಗರದ ರಾಮೇಶ್ವರಿ ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ಚಲೋ ಪಾದಯಾತ್ರೆ ಇದೊಂದು ಐತಿಹಾಸಿಕ ಪಾದಯಾತ್ರೆ, ನನ್ನ ರಾಜಕೀಯ ಜೀವನದಲ್ಲಿ ಎಂದು ಇದನ್ನು ಮರೆಯೋಲ್ಲ, ಇಡೀ ಪಾದಯಾತ್ರೆಯ ಮಾರ್ಗದುದ್ದಕ್ಕೂ ಎಲ್ಲ ಜನಾಂಗದವರು ನೀಡಿದ ಜನ ಬೆಂಬಲ, ಆಶೀರ್ವಾದ ನನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾರ್ಗದುದ್ದಕ್ಕೂ ಕೂಲಿಕಾರ್ಮಿಕರ ಸಮಸ್ಯೆ ಆಲಿಸಿದೆ, ಬಡಜನರ ಕಷ್ಟಗಳನ್ನು ಆಲಿಸಿದೆ, ಹಗಲು ವೇಷಧಾರಿಗಳ ಕಷ್ಟಗಳಿಗೆ ಸ್ಪಂದಿಸಿದೆ.  ಈ ಹೋರಾಟ, ಪಾದಯಾತ್ರೆ ಕಂಡು ನಾಟಕ ಎನಿಸಿರಬಹುದು. ಅದು ಅವರ ಮೂರ್ಖತನ. ಈ ಬಳ್ಳಾರಿಯ ಪಾದಯಾತ್ರೆ ಮುಂದಿನ ಹೋರಾಟಕ್ಕೆ ಭದ್ರ ಬುನಾದಿಯಾಗಿದೆ ಎಂದರು.

ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದೆ

ಸೆ.10 ರಂದು ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ನಾಳಿನ ಸಮಾವೇಶಕ್ಕೆ ಸುಮಾರು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ನಾನಾ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಲೆಕ್ಕ ಸಿಗುತ್ತಿಲ್ಲ. ಇನ್ನು ಹೆಚ್ಚಾಗಬಹುದು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಮ್ಮ ನಾಯಕರಾದ, ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಜೀ, ಮಾಜಿ ಸಚಿವರು, ಶಾಸಕರು, ಪಕ್ಷದ ಎಲ್ಲ ಮೋರ್ಚಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕೈ ನಾಯಕರು ವಿಚಲಿತರಾಗಿದ್ದಾರೆ

ನಮ್ಮದು ಜನಪರವಾದ ಹೋರಾಟ, ನಾವು ಶಾಂತಿ ಪ್ರಿಯರು, ನಮ್ಮ ಬಳ್ಳಾರಿ ಚಲೋ ಪಾದಯಾತ್ರೆಯ ವರ್ಚಸ್ಸು ಕಂಡು ಕಾಂಗ್ರೆಸ್ ನವರಿಗೆ ನಡುಕ ಶುರುವಾಗಿದೆ. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಕೈ ನಾಯಕರು ಮುಂದಾಗಿದ್ದಾರೆ. ವಿಚಲಿತರಾಗಿದ್ದಾರೆ. ಬಳ್ಳಾರಿಯ ನಮ್ಮ ಸಮಾವೇಶದ ಸ್ಥಳಕ್ಕೆ ಪರವಾನಿಗೆ ನೀಡುವ ವಿಚಾರದಲ್ಲಿ ಅಧಿಕಾರಿಗಳು ದೊಡ್ಡ ನಾಟಕ ಮಾಡಿದರು. ನಮ್ಮ ಬ್ಯಾನರ್ ತೆರವು, ಬಂಟಿಂಗ್ಸ್ ತೆರವು, ಪಕ್ಷದ ಧ್ವಜ ಕಟ್ಟಲು ಅಧಿಕಾರಿಗಳು ಅಡ್ಡಿ ಪಡಿಸಿದರು. ಇದಕ್ಕೆ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ. ಎಲ್ಲ ವ್ಯವಸ್ಥೆ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಹೋರಾಟ ಇದು ಅಂತ್ಯಯಲ್ಲ, ಇದು ಆರಂಭ ಎಂದರು.

2028ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಕ್ಕ

2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಜೀ, ಚುನಾವಣೆ ಚಾಣಕ್ಯ ಅಮಿತ್ ಶಾ, ನೇತೃತ್ವ, ಮಾರ್ಗದರ್ಶನದಲ್ಲಿ ನಡೆಯಲಿದೆ. 2028ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದ್ದು, ಮತ್ತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಹಡಗಲಿ ಶಾಸಕ ಕೃಷ್ಣ ನಾಯಕ್ ಇತರರಿದ್ದರು.

ಪಾದಯಾತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಮುಖಂಡರು ಭಾಗಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !