ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ಒಂದು ಮಿಲಿಯನ್ ಆನೆಗಳ ನಾಡು ಎಂದು ಪ್ರಸಿದ್ಧಿಯಾಗಿದ್ದ ಲಾವೋಸ್ ದೇಶದಲ್ಲಿ ಇಂದು ಅಲ್ಲಿನ ಆನೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಲಾವೋಸ್‌ನ ‘ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್’ ಆನೆಗಳ ರಕ್ಷಣೆಗಾಗಿ ಈಗ ಗುಜರಾತ್ ಮೂಲದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆ ‘ವಂತರಾ’ ಜೊತೆ ಕೈಜೋಡಿಸಿದೆ.
ಎರಡೂ ಸಂಸ್ಥೆಗಳು ಇಂದು ಮಹತ್ವದ ಜಂಟಿ ರಕ್ಷಣಾ ಕಾರ್ಯಕ್ರಮವನ್ನು ಘೋಷಿಸಿವೆ.
ಉಭಯ ಸಂಸ್ಥೆಗಳ ನಡುವೆ ಅಧಿಕೃತವಾಗಿ ಒಡಂಬಡಿಕೆ ಸಹಿ ಮಾಡಲಾಗಿದ್ದು, ಈ ಮೂಲಕ ಲಾವೋಸ್ ಆನೆಗಳ ಕಲ್ಯಾಣ ಮತ್ತು ವಿಶೇಷ ಪಶುವೈದ್ಯಕೀಯ ಆರೈಕೆಗೆ ಹೊಸ ಭರವಸೆ ಸಿಕ್ಕಿದೆ.
ಆತಂಕಕಾರಿ ಸ್ಥಿತಿಯಲ್ಲಿ ಲಾವೋಸ್ ಆನೆಗಳು
ಸದ್ಯದ ಅಂಕಿ-ಅಂಶಗಳ ಪ್ರಕಾರ, ಲಾವೋಸ್‌ನಲ್ಲಿ ಕೇವಲ 400 ಕಾಡಾನೆಗಳು ಮತ್ತು 400 ಸಾಕು ಆನೆಗಳು ಮಾತ್ರ ಉಳಿದುಕೊಂಡಿವೆ. ಕಾಡಾನೆಗಳು ಆವಾಸಸ್ಥಾನ ನಾಶ ಹಾಗೂ ಮಾನವ-ಆನೆ ಸಂಘರ್ಷದಿಂದ ನಲುಗುತ್ತಿದ್ದರೆ, ಸಾಕು ಆನೆಗಳು ಮರ ಕಡಿಯುವ ಕಠಿಣ ಕೆಲಸ ಮತ್ತು ಪ್ರವಾಸೋದ್ಯಮದ ಅತಿಯಾದ ಬಳಕೆಯಿಂದಾಗಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೆ ನರಳುತ್ತಿವೆ. ಲಾವೋಸ್‌ನಲ್ಲಿ ಪ್ರತಿ 1 ರಿಂದ 2 ಆನೆಗಳು ಜನಿಸುತ್ತಿದ್ದರೆ, ಬರೋಬ್ಬರಿ 10 ಆನೆಗಳು ಸಾವನ್ನಪ್ಪುತ್ತಿರುವುದು ಅಲ್ಲಿನ ತಜ್ಞರನ್ನು ಆತಂಕಕ್ಕೀಡುಮಾಡಿದೆ.
ರಾಷ್ಟ್ರೀಯ ತುರ್ತು ಸ್ಪಂದನಾ ತಂಡ ಲೋಕಾರ್ಪಣೆ
ಈ ಬಿಕ್ಕಟ್ಟಿಗೆ ತಕ್ಷಣ ಸ್ಪಂದಿಸಲು ಲಾವೋಸ್ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ‘ರಾಷ್ಟ್ರೀಯ ತುರ್ತು ಸ್ಪಂದನಾ ತಂಡ’ವನ್ನು ರಚಿಸಲಾಗಿದೆ. ವಂತರಾ ಸಂಸ್ಥೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸಂಚಾರಿ ಆನೆ ಚಿಕಿತ್ಸಾ ವಾಹನವನ್ನು ಒದಗಿಸಿದೆ. ಇದು ದೇಶದ ಯಾವುದೇ ಮೂಲೆಯಲ್ಲಿರುವ ಅನಾರೋಗ್ಯ ಪೀಡಿತ ಆನೆಗಳಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲಿದೆ ಹಾಗೂ ಆನೆಗಳ ದೀರ್ಘಕಾಲೀನ ಆರೈಕೆ ಹಾಗೂ ಪುನರ್ವಸತಿಗಾಗಿ ಸುಸಜ್ಜಿತ ವಿಶೇಷ ಆಸ್ಪತ್ರೆಯೊಂದನ್ನು ಸಹ ಸ್ಥಾಪಿಸಲಾಗುತ್ತಿದೆ.
ಮೊದಲ ದಿನವೆ 43 ವರ್ಷದ ಹೆಣ್ಣಾನೆಯ ರಕ್ಷಣೆ
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೊದಲ ದಿನವೇ, ಜೀವಮಾನವಿಡೀ ಭಾರೀ ತೂಕದ ಮರಗಳನ್ನು ಕಡಿಯುವ ಕಠಿಣ ಕೆಲಸ ಮಾಡಿ ನರಳುತ್ತಿದ್ದ ‘ಮೈ ಖಮ್ನಾಯ್’ ಎಂಬ 43 ವರ್ಷದ ಹೆಣ್ಣಾನೆಯನ್ನು ರಕ್ಷಿಸಲಾಗಿದೆ. ಈ ಆನೆಗೆ ಇನ್ನು ಮುಂದೆ ಮಂಡಲಾವೊ ಕೇಂದ್ರದಲ್ಲಿ ಗೌರವಯುತ ನಿವೃತ್ತಿ ಜೀವನ, ಪೌಷ್ಟಿಕ ಆಹಾರ ಹಾಗೂ ಇತರ ಆನೆಗಳೊಂದಿಗೆ ಮುಕ್ತವಾಗಿ ವಿಹರಿಸುವ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿಕೊಡಲಾಗುತ್ತದೆ.
ಆರೋಗ್ಯ ಶಿಬಿರ ಮತ್ತು ಸ್ಥಳೀಯ ಸಾಮರ್ಥ್ಯ ವರ್ಧನೆ
ಕಾರ್ಯಕ್ರಮದ ಭಾಗವಾಗಿ ಉಭಯ ಸಂಸ್ಥೆಗಳ ಪಶುವೈದ್ಯರ ತಂಡವು 12 ಆನೆಗಳಿಗೆ ಬೃಹತ್ ಆರೋಗ್ಯ ಶಿಬಿರ ನಡೆಸಿ ತಪಾಸಣೆ ನಡೆಸಿದೆ. ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಲಾವೋಸ್‌ನ ಸ್ಥಳೀಯ ಪಶುವೈದ್ಯರು ಮತ್ತು ಆನೆ ಮಾವುತರಿಗೆ ವಂತರಾ ವತಿಯಿಂದ ವಿಶೇಷ ತರಬೇತಿ ನೀಡುವ ಮೂಲಕ ದೀರ್ಘಕಾಲೀನ ಪ್ರಾಣಿ ಸಂರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:
ಈ ಬಗ್ಗೆ ಮಾಹಿತಿ ನೀಡಿದ ಮಂಡಲಾವೋದ ಆನೆ ಪಶು ವೈದ್ಯಕೀಯ ತಜ್ಞ ಡಾ. ಟಿಮ್ ಬೌಟ್ಸ್, ಈ ತುರ್ತು ಸ್ಪಂದನಾ ತಂಡದ ಸ್ಥಾಪನೆಯು ಲಾವೋಸ್ ಆನೆಗಳ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಆನೆಗಳ ಮಾಲೀಕರಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ನಾವು ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇವೆ. ಭಾರತದ ‘ವಂತರಾ’ ಸಂಸ್ಥೆಯ ಸಹಕಾರಕ್ಕೆ ನಮ್ಮ ಧನ್ಯವಾದಗಳು ಎಂದಿದ್ದಾರೆ.
ವಂತರಾದ ಅನುಸರಣೆ ಮತ್ತು ಶ್ರದ್ಧೆ ವಿಭಾಗದ ವಿಶೇಷ ನಿರ್ದೇಶಕ ಅಜಿತ್ ಕುಲಕರ್ಣಿ, ಲಾವೋಸ್‌ನ ಆನೆಗಳ ರಕ್ಷಣೆಗಾಗಿ ಮಂಡಲಾವೊ ಜತೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ಕೇವಲ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸೆಯಷ್ಟೇ ಅಲ್ಲದೆ, ಸ್ಥಳೀಯರ ಕೌಶಲ ವೃದ್ಧಿಸುವ ಮೂಲಕ ಲಾವೋಸ್ ಆನೆಗಳ ಭವಿಷ್ಯಕ್ಕೆ ಶಾಶ್ವತ ಹಾಗೂ ಸುಸ್ಥಿರ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.



