September 10, 2026
Thursday, September 10, 2026
spot_img

ಮಳೆ ಕೊರತೆಯ ಬಿಸಿ: ಬಿತ್ತಿದ ರಾಗಿ ಮೊಳಕೆಯೂ ಒಡೆಯಲಿಲ್ಲ, ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ

ಎಸ್. ರುದ್ರೇಶ್ವರ ರಾಮನಗರ:

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ್ದ ರಾಗಿ ಪೈರು ಒಣಗಲಾರಂಭಿಸಿದೆ. ರಾಗಿ ಫಸಲು ಕೈ ಸೇರುತ್ತದೆ ಎಂಬ ಆಶಾಭಾವನೆಯಲ್ಲಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರಿಗೆ ನಿರಾಸೆ ಕಾಡುತ್ತಿದೆ.

ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶ ಹೆಚ್ಚಿರುವ ಕಾರಣ ರಾಗಿ ಪ್ರಮುಖ ಬೆಳೆಯಾಗಿದೆ. ಪ್ರತಿ ವರ್ಷ ಜೂನ್ ಮೊದಲ ಅಥವಾ 2ನೇ ವಾರದಿಂದಲೇ ರಾಗಿ ಬಿತ್ತನೆ ಪ್ರಾರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಆಗಸ್ಟ್ ಮೊದಲ ವಾರದಿಂದ 3ನೇ ವಾರದವರೆಗೆ ರೈತರು ಅಲ್ಪಾವಧಿಯಲ್ಲಿ ಬೆಳೆಯುವ ಎಂ.ಎಲ್-322, ಕೆ.ಎಂ.ಆರ್-316, ಜಿಪಿಯು-28 ತಳಿಯ ರಾಗಿ ಬಿತ್ತನೆ ಮಾಡಿದ್ದಾರೆ. ಆಗಸ್ಟ್ ಕೊನೇ ವಾರದಿಂದ ಈವರೆಗೂ ಶೇ.33 ಮಳೆ ಕೊರತೆಯಾಗಿದೆ. ಇದೀಗ, ಒಂದಷ್ಟು ರೈತರ ಹೊಲದಲ್ಲಿ ರಾಗಿ ಬೆಳೆದು ಕುಂಟೆ ಹೊಡೆಯುವ ಹಂತಕ್ಕೆ ಬಂದಿದ್ದು, ಮಳೆ ಇಲ್ಲದೆ ಪೈರು ಬಾಡುತ್ತಿದ್ದರೆ, ಮತ್ತೆ ಕೆಲವು ಹೊಲಗಳಲ್ಲಿ ಬಿತ್ತಿದ ರಾಗಿ ಮೊಳಕೆಯೂ ಒಡೆದಿಲ್ಲ.

ಮೂಟೆಗಟ್ಟಲೇ ರಾಗಿ ಬೆಳೆದು ಖುಷಿ ಕಾಣುತ್ತಿದ್ದ ರೈತರಿಗೆ ಮಳೆ ಕೊರತೆ ನಿರಾಸೆಯತ್ತ ಮುಖ ಮಾಡಿಸುವ ಜತೆಗೆ ಮೇವಿಗೂ ತತ್ವಾರ ಪಡುವಂತಾಗಿದೆ. ಮಳೆ ಹೀಗೆ ಕೈಕೊಟ್ಟರೆ ಬಿತ್ತನೆ ಮಾಡಿದ ರಾಗಿ ಹೊಲಗಳು ಬರಡಾಗುತ್ತವೆ ಎಂಬ ಚಿಂತೆ ಕಾಡುತ್ತಿದೆ ಎಂದು ದೊಡ್ಡಗಂಗವಾಡಿ ಗ್ರಾಮದ ರೈತ ವಿಶ್ವನಾಥ್ ತಿಳಿಸಿದರು.

 ಕೃಷಿ ಇಲಾಖೆ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಎಲ್ಲಾ ಬೆಳೆಗಳು ಸೇರಿ ಸುಮಾರು 80,758 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಸ್ತುತ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಗಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು, ಪ್ರಸ್ತುತ 47138 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರತಿ ವರ್ಷ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಗೊಬ್ಬರ ದಾಸ್ತಾನು ಇದ್ದರೂ, ಮಳೆ ಕಾರಣದಿಂದ ರೈತರು ಯೂರಿಯಾ ಅಂಗಡಿಗಳತ್ತ ಮುಖ ಮಾಡದಂತಾಗಿದೆ. ಇನ್ನು ಆಗಸ್ಟ್ ಮೂರನೇ ವಾರದವರೆಗೂ ರಾಗಿ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ವಾರದಿಂದ ಮೋಡ ಮುಸುಕಿದ ವಾತಾವರಣ ಇದೆ. ಆದರೆ, ಸಂಜೆ ವೇಳೆಗೆ ಮೋಡಗಳು ಮರೆಯಾಗುತ್ತವೆ. ರೈತರು ದಿನ ಆಕಾಸದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಇತ್ತ ಬಿತ್ತಿದ ರಾಗಿ ಪೈರು ಮೊಳಕೆಯಲ್ಲೇ ಬಾಡುತ್ತಿರುವುದು ರೈತನಿಗೆ ಮತ್ತಷ್ಟು ಚಿಂತೆಯುಂಟು ಮಾಡಿದೆ. ರಾಗಿ ಬೆಳೆಯಲು ಉಳುಮೆ, ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ಸಂಬಳ ಸೇರಿ ಸಾವಿರಾರು ರೂ. ಖರ್ಚಾಗುತ್ತದೆ. ಆದರೆ, ಮಳೆ ಕೊರತೆಯಿಂದ ಉಳುಮೆ ಖರ್ಚು ಕೂಡ ಸಿಗುವುದಿಲ್ಲ ಎಂದು ಅರ್ಚಕರಹಳ್ಳಿಯ ರೈತ ಸೋಮಣ್ಣ ತಿಳಿಸಿದರು.

ಇದನ್ನೂ ಓದಿ:

ರಾಗಿ ಜಿಲ್ಲೆಯ ರೈತರ ಪ್ರಮುಖ ಬೆಳೆ. ಆದರೆ, ಈ ಬಾರಿ ಮಳೆ ಇಲ್ಲದೆ ರಾಗಿ ಪೈರು ಒಣಗುತ್ತಿದೆ. ಉಳುಮೆ ಕೂಲಿ ಕೂಡ ರೈತನಿಗೆ ಸಿಗದಂತಾಗಿದೆ. ಎಲ್ಲ ಬೆಳೆಗಳೂ ನೆಲಕಚ್ಚಿವೆ. ಸರ್ಕಾರ ಕೂಡಲೇ ಜಿಲ್ಲೆಯ ರೈತರ ನೆರವಿಗೆ ಧಾವಿಸಬೇಕು. ಪರಿಹಾರ ನೀಡಿ ರೈತರ ಕಣ್ಣೊರೆಸುವ ಬದಲು, ಎಲ್ಲ  ಬೆಳೆಗಳ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಹಿರಿಯ ರೈತ ಹೋರಾಟಗಾರ್ತಿ ಅನಸೂಯಮ್ಮ ತಿಳಿಸಿದರು.

ಜಿಲ್ಲೆಯಲ್ಲಿ ಅಲ್ಪಾವಧಿ ರಾಗಿ ತಳಿ ಬಿತ್ತನೆ ಮಾಡಲಾಗಿದೆ. ಹಲವೆಡೆ ಪೈರು ಬೆಳವಣಿಗೆ ಹಂತದಲ್ಲಿದ್ದರೆ, ಕೆಲವು ಪ್ರದೇಶದಲ್ಲಿ ಮೊಳಕೆ ಹಂತದಲ್ಲಿದೆ. ಮಳೆ ಇಲ್ಲದೆ ರಾಗಿ ಪೈರು ಬಾಡುತ್ತಿವೆ. ಪ್ರಸ್ತುತ ಮಳೆ ಬಂದರೆ ಒಂದಷ್ಟು ಚೇತರಿಕೆ ಕಾಣಬಹುದು. ಆದರೆ, ಇಳುವರಿ ಕುಂಠಿತಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !