September 10, 2026
Thursday, September 10, 2026
spot_img

ನನಗೆ ಈ ರಿಂಗ್ ಬಗ್ಗೆ ಏನೂ ಗೊತ್ತೇ ಇರ್ಲಿಲ್ಲ! ಸಮಂತಾ ಹಂಚಿಕೊಂಡ ಸೀಕ್ರೆಟ್ ರಿಂಗ್ ಕಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಜಗತ್ತಿನಲ್ಲಿ ಸ್ಟಾರ್‌ಗಳ ಮದುವೆ, ನಿಶ್ಚಿತಾರ್ಥ ಅಂದ ತಕ್ಷಣ ಜನರ ಕಣ್ಣು ಮೊದಲು ಬೀಳೋದೇ ಅವರು ಹಾಕಿಕೊಳ್ಳೋ ಒಡವೆ ಮತ್ತೆ ಉಂಗುರದ ಮೇಲೆ. ಈಗ ಸೌತ್ ಅಷ್ಟೇ ಅಲ್ಲ, ಇಡೀ ಇಂಡಿಯಾದಲ್ಲೇ ಸೌಂಡ್ ಮಾಡ್ತಿರೋದು ನಟಿ ಸಮಂತಾ ರುತ್ ಪ್ರಭು ಅವರ ಕೈಯಲ್ಲಿರೋ ಆ ಬ್ಯೂಟಿಫುಲ್ ನಿಶ್ಚಿತಾರ್ಥದ ಉಂಗುರ. ಎಲ್ಲರೂ ‘ಎಷ್ಟು ಚೆನ್ನಾಗಿದೆ, ಎಲ್ಲಿ ತಗೊಂಡಿರಬಹುದು?’ ಎಂದು ಮಾತನಾಡ್ತಿದ್ರು. ಈಗ ಸ್ವತಃ ಸಮಂತಾ ಅವರೇ ಈ ಉಂಗುರದ ಹಿಂದಿರೋ ಒಂದು ದೊಡ್ಡ ಸರ್ಪ್ರೈಸ್ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ಕೊಟ್ಟ ಒಂದು ಇಂಟರ್‌ವ್ಯೂನಲ್ಲಿ ಸಮಂತಾ ಈ ರಿಂಗ್ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಹುಡುಗಿಯರು ತಮ್ಮ ನಿಶ್ಚಿತಾರ್ಥದ ರಿಂಗ್ ಹೇಗಿರಬೇಕು ಎಂದು ಮೊದಲೇ ಡಿಸೈನ್ ಸೆಲೆಕ್ಟ್ ಮಾಡ್ತಾರೆ ಅಲ್ವಾ? ಆದ್ರೆ ಸಮಂತಾ ವಿಷಯದಲ್ಲಿ ಹಾಗೆ ಆಗಿಲ್ವಂತೆ. “ನನಗೆ ಈ ರಿಂಗ್ ಬಗ್ಗೆ ಸ್ವಲ್ಪನೂ ಐಡಿಯಾ ಇರ್ಲಿಲ್ಲ ಇದರ ಡಿಸೈನ್ ಆಯ್ಕೆ ಮಾಡೋದ್ರಲ್ಲಿ ನನ್ನ ಪಾತ್ರ ಏನೆಂದರೆ ಏನೂ ಇಲ್ಲ. ಎಲ್ಲವೂ ರಾಜ್ ಮಾಡಿದ್ದು, ನೀವು ಅವರನ್ನೇ ಕೇಳ್ಬೇಕು,” ಎಂದು ನಗುತ್ತಾ ಹೇಳಿದ್ದಾರೆ.

ಹಾಗಾದ್ರೆ ಈ ರಿಂಗ್ ಎಲ್ಲಿಂದ ಬಂತು? ಯಾರು ಮಾಡಿದ್ರು? ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಸಮಂತಾ ಮತ್ತು ರಾಜ್ ಅವರ ಆಪ್ತ ಸ್ನೇಹಿತರೊಬ್ಬರು ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಜ್ಯುವೆಲ್ಲರಿ ಡಿಸೈನರ್ ಆಗಿದ್ದಾರಂತೆ. ಅವರ ಹೆಸರು ಥಿಯೋಡೋರೊಸ್ ಸವೊಪೌಲೋಸ್. ದೊಡ್ಡ ಪ್ರಚಾರ ಬಯಸದೆ, ತುಂಬಾ ವಿಶಿಷ್ಟವಾದ ಒಡವೆಗಳನ್ನು ಮಾಡೋದಕ್ಕೆ ಇವರು ಹೆಸರುವಾಸಿ. ಇವರೇ ಸ್ಪೆಷಲ್ ಆಗಿ ಸಮಂತಾಗಾಗಿ ಈ ರಿಂಗ್ ಡಿಸೈನ್ ಮಾಡಿದ್ದಾರೆ. ಥಿಯೋಡೋರೊಸ್ ಅವರು ಸಮಂತಾ ರಿಂಗ್ ಹಾಕೊಂಡಿರೋ ಫೋಟೋ ಶೇರ್ ಮಾಡಿ, “ಸಮಂತಾ ಮತ್ತು ರಾಜ್ ಅವರ ಪ್ರೀತಿಯ ಸಂಕೇತವಾಗಿ ಈ ನೈಸರ್ಗಿಕ ಡೈಮಂಡ್ ರಿಂಗ್ ನೀಡಲು ನನಗೆ ಹೆಮ್ಮೆಯಾಗುತ್ತಿದೆ” ಎಂದು ವಿಶ್ ಮಾಡಿದ್ದಾರೆ.

https://www.instagram.com/p/DRtrePWET2L/?utm_source=ig_web_button_share_sheet

ಸೆಲೆಬ್ರಿಟಿ ಜ್ಯುವೆಲ್ಲರಿ ಎಕ್ಸ್‌ಪರ್ಟ್ ಪ್ರಿಯಾಂಶಿ ಗೋಯಲ್ ಹೇಳೋ ಪ್ರಕಾರ, ಈ ರಿಂಗ್ ‘ಲಾಜೆಂಜ್‌-ಕಟ್’ ಡೈಮಂಡ್‌ನಿಂದ ಮಾಡಲ್ಪಟ್ಟಿದ್ದು. ಇದರಲ್ಲಿ ಎಂಟು ‘ಪೋರ್ಟ್ರೇಟ್-ಕಟ್’ ಡೈಮಂಡ್ ಎಸಳುಗಳಿವೆ. ಈ ಮಾದರಿಯ ಡೈಮಂಡ್ ಡಿಸೈನ್‌ಗೆ ನಮ್ಮ ದೇಶದಲ್ಲೇ ದೊಡ್ಡ ಇತಿಹಾಸವಿದೆ. ಮೊಘಲರ ಕಾಲದಲ್ಲಿ ಈ ತರಹದ ರಾಯಲ್ ಡಿಸೈನ್‌ಗಳನ್ನು ಬಳಸುತ್ತಿದ್ದರು. ಇದನ್ನು ಡಿಸೈನ್ ಮಾಡೋ ಕಲಾಕಾರರು ಜಗತ್ತಿನಲ್ಲೇ ತುಂಬಾ ಕಡಿಮೆ ಜನರಿದ್ದಾರೆ ಎಂದಿದ್ದಾರೆ.

ಇಷ್ಟೆಲ್ಲಾ ವಿಶೇಷತೆ ಇರೋ ಈ ಅಪರೂಪದ ಡೈಮಂಡ್ ರಿಂಗ್ ಬೆಲೆ ಸುಮಾರು 1.5 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ, ಸಮಂತಾಗೆ ರಾಜ್ ಕೊಟ್ಟ ಈ ಸರ್ಪ್ರೈಸ್ ಗಿಫ್ಟ್ ನಿಜಕ್ಕೂ ರಾಯಲ್ ಆಗಿದೆ ಅಂತಾನೇ ಹೇಳ್ಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !