ಹೊಸದಿಗಂತ ವರದಿ ಅಂಕೋಲಾ:
ಅಗಸೂರು ಸರಳೇಬೈಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾದಲ್ಲಿ ಕಾನೂನುಬಾಹಿರವಾಗಿ ಮಕ್ಕಳನ್ನು ಕೆಲಸಕ್ಕೆ ಇರಿಸಿದ ದೂರಿನ ಮೇಲೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಮಕ್ಕಳ ರಕ್ಷಣೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕ ಸರಳೇಬೈಲಿನ ಸಂಗೀತಾ ಡಾಬಾದಲ್ಲಿ ಒಬ್ಬ ಬಾಲಕಾರ್ಮಿಕ ಮತ್ತು ಒಬ್ಬ ಕಿಶೋರ ಕಾರ್ಮಿಕ ದುಡಿಯುತ್ತಿರುವುದು ದಾಳಿ ನಡೆಸಿದ ಕಾರ್ಮಿಕ ಇಲಾಖೆಯ ತಂಡದ ಗಮನಕ್ಕೆ ಬಂದಿದ್ದು ಅವರನ್ನು ಕಾರವಾರದ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗಿದೆ.
ಡಾಬಾದ ಮಾಲಿಕರ ಮೇಲೆ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಮತ್ತು ಜೆ.ಜೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



