ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣವಂತರಾಗಿರುವುದಕ್ಕಿಂತ ಶುದ್ಧ ನೀರು ಮತ್ತು ಶುದ್ಧ ಗಾಳಿ ಸೇವಿಸುವವನೇ ನಿಜವಾದ ಯೋಗವಂತ. ದುಡ್ಡಿಗಿಂತ ಶುದ್ಧ ನೀರು ಹಾಗೂ ನೆಮ್ಮದಿಯ ಜೀವನ ಮುಖ್ಯ ಎಂಬುದನ್ನು ಸಮಾಜ ಅರಿಯಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಗುರುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ನಗರ ವ್ಯಾಮೋಹದಿಂದಾಗಿ ನದಿ, ಕೆರೆಗಳನ್ನು ಮುಚ್ಚಿ ಅವುಗಳ ಜಾಗದಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇದರಿಂದ ನಗರಗಳಲ್ಲಿ ಮನುಷ್ಯರು ಮತ್ತು ಕಾರ್ಖಾನೆಗಳ ತ್ಯಾಜ್ಯ ನದಿಗಳನ್ನು ಸೇರುತ್ತಿದ್ದು, ಜಲಮೂಲಗಳು ಮಲಿನಗೊಳ್ಳುತ್ತಿವೆ ಎಂದು ಹೇಳಿದರು.

ಆಯುರ್ವೇದದಲ್ಲಿ ನೀರಿನ ವಿವಿಧ ಮೂಲಗಳು ಹಾಗೂ ಅವುಗಳ ಗುಣಧರ್ಮಗಳ ಬಗ್ಗೆ ವಿವರಿಸಲಾಗಿದೆ. ಮಳೆನೀರು, ಬಾವಿ, ನದಿ, ಕೆರೆ ಸೇರಿದಂತೆ ಭೂಮಿಯ ವಿವಿಧ ಜಲಮೂಲಗಳ ನೀರಿಗೆ ವಿಭಿನ್ನ ಗುಣಗಳಿವೆ. ಮಣ್ಣಿನ ಸ್ವರೂಪ, ಪ್ರದೇಶ ಹಾಗೂ ಋತುಮಾನಕ್ಕೆ ಅನುಗುಣವಾಗಿ ನೀರಿನ ಗುಣವೂ ಬದಲಾಗುತ್ತದೆ ಎಂದು ಅವರು ತಿಳಿಸಿದರು.

ಯುವಜನರ ಮನಸ್ಥಿತಿ ಬದಲಾಗಲಿ:
ಉದ್ಯೋಗದ ಕಾರಣಕ್ಕೆ ಮಾತ್ರವಲ್ಲದೆ ನಗರ ವ್ಯಾಮೋಹ ಹಾಗೂ ಹಳ್ಳಿಗಳಲ್ಲಿ ಯುವಕರಿಗೆ ವಿವಾಹ ಸಂಬಂಧಗಳು ಸಿಗುತ್ತಿಲ್ಲ ಎಂಬ ಕಾರಣದಿಂದಲೂ ಗ್ರಾಮೀಣ ಪ್ರದೇಶಗಳಿಂದ ವಲಸೆ ಹೆಚ್ಚುತ್ತಿದೆ. ಹಣಕ್ಕಿಂತ ಶುದ್ಧ ನೀರು, ಶುದ್ಧ ಗಾಳಿ ಹಾಗೂ ನೆಮ್ಮದಿಯ ಜೀವನವಿರುವ ಹಳ್ಳಿಯ ಬದುಕು ಶ್ರೇಷ್ಠ ಎಂಬುದನ್ನು ಯುವಜನರು ಅರಿಯಬೇಕು ಎಂದು ರಾಘವೇಶ್ವರ ಶ್ರೀ ಹೇಳಿದರು.

ಆಚಾರ್ಯ ಸುಶೃತರು ಮಳೆಯ ನೀರು ಸಿಗದೇ ಇದ್ದರೆ ಅಥವಾ ಸಂಗ್ರಹ ಖಾಲಿಯಾದರೆ ಭೂಮಿಯ ನೀರನ್ನು ಸೇವಿಸಲು ಸೂಚಿಸಿದ್ದಾರೆ. ಹಾಗೂ ಭೂಮಿಯ ನೀರಿನಲ್ಲಿ ಬಾವಿ, ನದಿ, ಕೆರೆ, ಬೆಟ್ಟದ ನೀರು ಸೇರಿದಂತೆ ಏಳು ವಿಧಗಳನ್ನು ಗುರುತಿಸಿದ್ದು, ಇವುಗಳ ಗುಣಾವಗುಣಗಳನ್ನು ವಿಮರ್ಶಿಸಿದ್ದಾರೆ. ಕರಾವಳಿ – ಮಲೆನಾಡಿನ ನೀರಿಗಿಂತ ಬಯಲು ಸೀಮೆಯ ನೀರು ಸೇವನೆಗೆ ಯೋಗ್ಯ. ಬಯಲು ಸೀಮೆಯ ನೀರಿಗಿಂತ ಅರೆ ಮಲೆನಾಡಿನ ನೀರು ಉತ್ತಮ ಎಂದು ಆಯುರ್ವೇದ ಸೂಚಿಸಿದೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶುಕ್ಲ ಯಜುರ್ವೇದ ಪಾರಾಯಣವು ಇಂದು ಸಮಾಪನಗೊಂಡಿತು. ಪಾರಾಯಣವನ್ನು ಮಾಡಿದ ವೇದ ವಿದ್ವಾಂಸರು ಶ್ರೀಗಳಿಂದ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಹೆಗಡೆ ಕಣ್ಣಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಡಾ.ಜಿ.ಎಲ್. ಹೆಗಡೆ, ಶ್ರೀಕಾಂತ್ ಪಂಡಿತ್, ಹೇರಂಭ ಶಾಸ್ತ್ರಿ, ದಿನಪ್ರಧಾನರಾಗಿ ಸಾದಂಗಾಯ ರಾಮಚಂದ್ರ ಭಟ್ ದಂಪತಿ ಉಪಸ್ಥಿತರಿದ್ದರು.
ಕರ್ಕಿ ಜ್ಞಾನೇಶ್ವರಿ ದೈವಜ್ಞ ಮಠದ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಮತ್ತು ತಂಡದವರು ಸುವಸ್ತುಗಳನ್ನು ಸಮರ್ಪಿಸಿ, ಶ್ರೀಗಳ ಆಶೀರ್ವಾದ ಪಡೆದರು.

ಕನ್ನಡ ವೈಶ್ಯವಾಣಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಶ್ರೀಮಠದ ಗುರುಪರಂಪರೆಗೆ ಕನ್ನಡ ವೈಶ್ಯವಾಣಿ ಸಮಾಜ ಬಂಧುಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ಶ್ರೀಗಳ ಆಶೀರ್ವಾದವನ್ನು ಪಡೆದರು. ಚಂದ್ರಕಾಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.




