ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯವನ್ನು ನಡುಗಿಸಿರುವ KPSC ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಭ್ರಷ್ಟ ಅಧಿಕಾರಿಗಳ ಕರಾಳ ಮುಖಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಗರಣದ ಪ್ರಮುಖ ಆರೋಪಿಯಾಗಿರುವ IAS ಅಧಿಕಾರಿ ಗ್ಯಾನೇಂದ್ರ ಕುಮಾರ್, ಉದ್ಯೋಗ ಆಕಾಂಕ್ಷಿಗಳಿಂದ ಲೂಟಿ ಮಾಡಿದ ಕೋಟ್ಯಂತರ ರೂಪಾಯಿ ಹಣವನ್ನು ಸ್ವಂತ ಮೋಜು-ಮಸ್ತಿಗಾಗಿ ಬಳಸಿಕೊಂಡಿರುವ ಸ್ಫೋಟಕ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಗರ್ಲ್ಫ್ರೆಂಡ್ಗೆ 26 ಲಕ್ಷದ ಗೋಲ್ಡ್ ಗಿಫ್ಟ್
ಗ್ಯಾನೇಂದ್ರ ಕುಮಾರ್ ಅವರು ತಾವು ಲೂಟಿ ಮಾಡಿದ ಹಣದಲ್ಲಿ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ ಶಾಪ್ನಲ್ಲಿ ಅಯೋಧ್ಯೆ ಮೂಲದ ತಮ್ಮ ಗೆಳತಿಗೆ ಬರೋಬ್ಬರಿ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ಕೊಡಿಸಿದ್ದರು.
ವಿಶೇಷವೆಂದರೆ, ಈ ಚಿನ್ನದ ಬಿಲ್ ಅನ್ನು ಬೀದರ್ನ ಲಕ್ಷ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ನ ಬಸವರಾಜ್ ಎಂಬುವವರ ಖಾತೆಯಿಂದ ಪಾವತಿಸಲಾಗಿತ್ತು. ಸದ್ಯ ಸಿಐಡಿ ಅಧಿಕಾರಿಗಳು ಈ ಚಿನ್ನ ಖರೀದಿಯ ಬಿಲ್ ಮತ್ತು ಇಬ್ಬರೂ ಜತೆಯಾಗಿ ಚಿನ್ನ ಖರೀದಿಸುತ್ತಿರುವ ಸಿಸಿಟಿವಿ ಫೋಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿನ್ನ ಪಡೆದ ಆ ಗೆಳತಿಗೂ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ.
ಏರ್ಪೋರ್ಟ್ ಬಳಿ ಲಕ್ಸುರಿ ವಿಲ್ಲಾ ಖರೀದಿ
ಕೇವಲ ಆಭರಣ ಮಾತ್ರವಲ್ಲದೆ, ಅಕ್ರಮದ ಹಣದಲ್ಲಿ ಗ್ಯಾನೇಂದ್ರ ಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಿಲ್ಲಾವೊಂದನ್ನು ತಮ್ಮ ಸಹೋದರ ಕಮಲಾಪತಿ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ ಎಂಬ ಶಂಕೆ ಇದೀಗ ವ್ಯಕ್ತವಾಗಿದ್ದು, ಈ ಕುರಿತು ಸಿಐಡಿ ದಾಖಲೆಗಳನ್ನು ಜಾಲಾಡುತ್ತಿದೆ.
ಇದನ್ನೂ ಓದಿ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಡ್ರಿಲ್
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಮತ್ತು ಅವರ ಸಹಚರ ಬಸವರಾಜ್ ಕನ್ನಾಳೆಗೆ ಈಗ ʼಇಡಿʼ ಬಿಸಿ ಮುಟ್ಟಿಸಿದೆ. ನೇಮಕಾತಿ ಹಗರಣದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ತನಿಖೆಗಾಗಿ ಕೋರ್ಟ್ನಿಂದ ವಿಶೇಷ ಅನುಮತಿ ಪಡೆದಿರುವ ʼಇಡಿʼ ಅಧಿಕಾರಿಗಳು, ಜೈಲಿನಲ್ಲೇ ಇಬ್ಬರು ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಈ ಜಾಲಕ್ಕೆ ಸಂಬಂಧಿಸಿದಂತೆ ರಾಜ್ಯದ 21ಕ್ಕೂ ಹೆಚ್ಚು ಕಡೆಗಳಲ್ಲಿ ʼಇಡಿʼ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.



