ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ದುರ್ಗಾ ಪೂಜೆ, ನವರಾತ್ರಿಯ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು ಅನ್ನೋ ರೂಢಿ ಇದೆ. ಆದ್ರೆ ಇದಕ್ಕೆ ಪುಷ್ಟಿ ನೀಡುವಂತೆ ಧೀರೇಂದ್ರ ಶಾಸ್ತ್ರಿ ಅವರು ಕೂಡ ದುರ್ಗಾ ಪೂಜೆ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರ ಸೇವಿಸಬಾರದು ಮತ್ತು ಮಾಂಸ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಎಂದು ಕರೆನೀಡಿದ್ದರು.
ಈಗ ಇದಕ್ಕೆ ತಿರುಗೇಟು ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ ದೇವಸ್ಥಾನದಲ್ಲಿ ಮೀನಿನ ಪ್ರಸಾದ ಸೇವಿಸಿದ್ದಾರೆ.
ಕೌಶಿಕಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾಳಿಘಾಟ್‌ಗೆ ತೆರಳಿದ್ದ ಸುವೇಂದು ಅಧಿಕಾರಿ, ದೇವಸ್ಥಾನದಲ್ಲಿ ನೀಡಲಾದ ಭೋಗದಲ್ಲಿ ಮೀನಿನ ತಲೆ, ಕರಿದ ಮೀನು ಹಾಗೂ ಬಸಂತಿ ಪುಲಾವ್ ಸೇವಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಬೆಳವಣಿಗೆಯ ಕುರಿತು ಮಾಹಿತಿ ಹಂಚಿಕೊಂಡಿರುವ ಬಂಗಾಳ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಬಂಗಾಳದ ಆಹಾರ ಪದ್ಧತಿ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ನಡೆಯುತ್ತಿರುವ ಸಸ್ಯಾಹಾರ-ಮಾಂಸಾಹಾರ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಹೇಳಿದ್ದಾರೆ. ಕಾಳಿಘಾಟ್‌ನ ಸಾಂಪ್ರದಾಯಿಕ ಮೀನು ಪ್ರಸಾದವನ್ನು ಗೌರವಿಸುವುದಾಗಿ ತಿಳಿಸಿದ್ದು, ಬಂಗಾಳದ ಸಂಪ್ರದಾಯ ಹಾಗೂ ಜನರ ಆಹಾರ ಆಯ್ಕೆಯ ಪರ ಪಕ್ಷ ನಿಲ್ಲಲಿದೆ ಎಂದಿದ್ದಾರೆ.
ಬಂಗಾಳದಲ್ಲಿ ಮೀನು ಸಾಮಾನ್ಯ ಆಹಾರದ ಭಾಗವಾಗಿದ್ದು, ಶಾಕ್ತ ಸಂಪ್ರದಾಯದಲ್ಲೂ ಕೆಲವು ದೇವಾಲಯಗಳಲ್ಲಿ ಮೀನು ಮತ್ತು ಮಾಂಸವನ್ನು ದೇವರಿಗೆ ಅರ್ಪಿಸುವ ಪದ್ಧತಿಯಿದೆ.



