September 11, 2026
Friday, September 11, 2026
spot_img

‘ಒಬ್ಬರಿಗೆ ಮಾತ್ರ ವಿಶೇಷ ವಿನಾಯಿತಿ ನೀಡೋದಕ್ಕೆ ಸಾಧ್ಯವಿಲ್ಲ’: ವಿನೇಶ್ ಫೋಗಟ್ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಹಿರಿಯ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ನಡೆಯಲಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಅನುಮತಿ ನೀಡಲು ನಿರಾಕರಿಸಿದೆ.

ಸೆಪ್ಟೆಂಬರ್ 14ರಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ಆಯ್ಕೆ ಟ್ರಯಲ್ಸ್‌ನ ಅರ್ಹತಾ ಪಟ್ಟಿಯಲ್ಲಿ ತಾತ್ಕಾಲಿಕವಾಗಿ ತಮ್ಮನ್ನು ಸೇರಿಸಬೇಕೆಂದು ಫೋಗಟ್ ಮನವಿ ಮಾಡಿದ್ದರು. ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದರೂ ಸ್ಪರ್ಧಿಸಲು ಅವಕಾಶ ನೀಡುವುದು ಅವರಿಗಾಗಿಯೇ ವಿಶೇಷ ವಿನಾಯಿತಿ ಕಲ್ಪಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿನೇಶ್ ಫೋಗಟ್ ಕೊಟ್ಟ ಕಾರಣವೇನು?

ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ಚೇತರಿಕೆಯ ಅವಧಿಯಲ್ಲಿ ಸ್ಪರ್ಧಾತ್ಮಕ ಕುಸ್ತಿಯಿಂದ ದೂರವಿದ್ದ ಕಾರಣ ಹಲವು ಅರ್ಹತಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಫೋಗಟ್ ವಾದಿಸಿದ್ದರು. ಅಲ್ಲದೆ, ಗೊಂಡಾದಲ್ಲಿ ನಡೆದ ಸೀನಿಯರ್ ಓಪನ್ ರ‍್ಯಾಂಕಿಂಗ್ ಟೂರ್ನಿಯಲ್ಲಿ ಭಾಗವಹಿಸುವ ಮುನ್ನ WFI ಶೋಕಾಸ್ ನೋಟಿಸ್ ನೀಡಿದ್ದರಿಂದಲೂ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಮೇ 30ರಂದು ನಡೆದ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಸೆಮಿಫೈನಲ್ ತಲುಪಿದ್ದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಇದನ್ನೂ ಓದಿ:

ನ್ಯಾಯಾಲಯ ಹೇಳಿದ್ದೇನು?

ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಹಕ್ಕಿಗೂ WFI ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದಿನ ಏಷ್ಯನ್ ಗೇಮ್ಸ್ ಟ್ರಯಲ್ಸ್‌ಗೆ ನೀಡಿದ್ದ ಅನುಮತಿಯನ್ನು ಮುಂದಿನ ಸ್ಪರ್ಧೆಗಳಿಗೂ ಅನ್ವಯಿಸುವ ಸಾಮಾನ್ಯ ವಿನಾಯಿತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.

ಫೋಗಟ್ ವಿರುದ್ಧದ ಬಾಕಿ ಇರುವ ವಿಚಾರಣೆಯನ್ನೂ ನ್ಯಾಯಾಲಯ ಪರಿಗಣಿಸಿದೆ. ಆದರೆ ಆರೋಪಗಳ ಕುರಿತು ಯಾವುದೇ ಅಂತಿಮ ಅಭಿಪ್ರಾಯ ನೀಡಿಲ್ಲ. ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, WFI ನಿಯಮಗಳ ಅಂತಿಮ ಮಾನ್ಯತೆ ಹಾಗೂ ಶಿಸ್ತು ವಿಚಾರಣೆಯ ಬಗ್ಗೆ ತೀರ್ಪು ನೀಡಿಲ್ಲ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !