September 12, 2026
Saturday, September 12, 2026
spot_img

WEATHER | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ನಾಳೆ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಯ ಅಬ್ಬರ ಕಮ್ಮಿಯಾಗಿದೆ. ವರುಣದೇವ ಸದ್ಯಕ್ಕೆ ಸ್ವಲ್ಪ ಬ್ರೇಕ್ ತಗೊಂಡಿದ್ದು, ಬಹುತೇಕ ಕಡೆ ಒಣಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. ಆದರೆ, ಇದರ ಮಧ್ಯೆಯೂ ರಾಜ್ಯದ ಕೆಲವು ಜಿಲ್ಲೆಗಳ ಜನರಿಗೆ ಹವಾಮಾನ ಇಲಾಖೆ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ಸಾಧ್ಯತೆ

ಮುಂಗಾರು ದುರ್ಬಲವಾಗಿದ್ದರೂ ಸಹ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಜಿಟಿಜಿಟಿ ಮಳೆಯಾಗಬಹುದು. ಇತ್ತ ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲೂ ಸಾಧಾರಣ ಮಳೆಯಾಗುವ ಚಾನ್ಸ್ ಇದೆ. ಆದರೆ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಜನರಿಗೆ ಸದ್ಯಕ್ಕೆ ಭಾರೀ ಮಳೆಯ ನಿರೀಕ್ಷೆಯಂತೂ ಇಲ್ಲ.

ನಾಳೆ ಈ ಭಾಗದಲ್ಲಿ ಗುಡುಗು-ಗಾಳಿ ಸಹಿತ ಮಳೆ

ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕಳೆದ 24 ಗಂಟೆಗಳಲ್ಲಿ ಚಾಮರಾಜನಗರದಲ್ಲಿ ಮಾತ್ರ 2 ಸೆಂ.ಮೀ ನಷ್ಟು ಮಳೆ ದಾಖಲಾಗಿದೆ.

ಹಾಗೆ ನಾಳೆ (ಸೆ. 13) ಇದೇ ಜಿಲ್ಲೆಗಳಲ್ಲಿ ಮಳೆಯ ಜತೆಗೆ ಗುಡುಗು ಸಿಡಿಲಿನ ಆರ್ಭಟ ಇರಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಇನ್ನೊಂದೆಡೆ, ಬಂಗಾಳಕೊಲ್ಲಿಯ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಸದ್ಯದಲ್ಲೇ ಮತ್ತಷ್ಟು ಚುರುಕಾಗಲಿದ್ದು, ನೈಋತ್ಯ ದಿಕ್ಕಿನತ್ತ ಚಲಿಸಲಿದೆ. ಈ ವಾಯುಭಾರ ಕುಸಿತ ಮುಂದಿನ ದಿನಗಳಲ್ಲಿ ಹೇಗೆ ಬದಲಾಗುತ್ತದೆ ಎಂಬುದರ ಆಧಾರದ ಮೇಲೆ ನಮ್ಮ ರಾಜ್ಯದಲ್ಲೂ ಮಳೆಯ ಪ್ರಮಾಣದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !