September 11, 2026
Friday, September 11, 2026
spot_img

ಅಭಿವೃದ್ಧಿಯ ಓಟದಲ್ಲಿ ನೀರನ್ನೇ ಮರೆಯದಿರಿ: ಜಲಮೂಲಗಳ ನಾಶಕ್ಕೆ ರಾಘವೇಶ್ವರ ಶ್ರೀ ಕಳವಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀರಿನ ಶುದ್ಧತೆಗೆ ಧರ್ಮಶಾಸ್ತ್ರಗಳಲ್ಲಿ ವಿಶೇಷ ಮಹತ್ವ ನೀಡಲಾಗಿದ್ದು, ಜಲಮೂಲಗಳನ್ನು ಮಲಿನಗೊಳಿಸುವುದು ಮಹಾಪಾಪ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಪ್ರಾಚೀನ ಭಾರತದಲ್ಲಿ ಜಲಮೂಲಗಳಿಗೆ ನೀಡಲಾಗುತ್ತಿದ್ದ ಗೌರವವನ್ನು ವಿವರಿಸಿದರು. ರಾಮಾಯಣದಲ್ಲಿ ಭರತನು ‘ನಾನು ರಾಮನಿಗೆ ವಂಚನೆ ಮಾಡಿದ್ದರೆ ನೀರನ್ನು ಮಲಿನ ಮಾಡಿದರೆ ಸಿಗುವ ನರಕವು ಸಿಗಲಿ’ ಎಂದು ಶಪಥ ಮಾಡಿರುವುದು ಜಲದ ಮಹತ್ವಕ್ಕೆ ಸಾಕ್ಷಿ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳು ಹಾಗೂ ಪಾರಂಪರಿಕ ಸುವಸ್ತುಗಳನ್ನು ನಾಶ ಮಾಡುತ್ತಿರುವುದು ವಿಷಾದನೀಯ. ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಹಲವು ಸುವಸ್ತುಗಳು ಬಳಕೆಯಿಂದ ದೂರವಾದ ಪರಿಣಾಮ ಇಂದು ಕಣ್ಮರೆಯಾಗಿವೆ. ಇನ್ನು ಕೆಲವು ಮಾನವನ ಅತಿಕ್ರಮಣದಿಂದ ನಾಶವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯುರ್ವೇದದಲ್ಲಿ ಋತುಗಳಿಗೆ ಅನುಗುಣವಾಗಿ ನೀರಿನ ಗುಣ ಹಾಗೂ ಅದರ ಬಳಕೆಯ ಕುರಿತು ವಿವರಿಸಲಾಗಿದೆ. ಹೇಮಂತ, ಶಿಶಿರ, ವಸಂತ ಹಾಗೂ ಗ್ರೀಷ್ಮ ಋತುಗಳಲ್ಲಿ ನೀರಿನ ಗುಣಧರ್ಮಗಳು ಬದಲಾಗುತ್ತವೆ. ಹಾರೀತ ಸಂಹಿತೆಯಲ್ಲಿಯೂ ನೀರನ್ನು ವಿವಿಧ ಪ್ರಕಾರಗಳಾಗಿ ವಿಂಗಡಿಸಲಾಗಿದ್ದು, ಪಾಪೋದಕ, ರೋಗೋದಕ, ಅಂಶೋಧಕ ಹಾಗೂ ಆರೋಗ್ಯೋದಕ ಎಂಬುದಾಗಿ ಸೂಚಿಸಿದೆ. ಪಾತ್ರೆಯಲ್ಲಿ ನೀರಿನ್ನು ಕಾಲು ಭಾಗಕ್ಕೆ ಆಗುವಷ್ಟು ಕುದಿಸಿದ ನೀರು ಆರೋಗ್ಯೋದಕವಾಗಿದ್ದು, ಇದು ವಾತ ದೋಷದ ನಿವಾರಣೆಯ ಜೊತೆಗೆ ಅನೇಕ ರೋಗಗಳನ್ನು ನಿವಾರಿಸುತ್ತದೆ ಹಾಗೂ ಜೀರ್ಣಾಗ್ನಿಯ ಜ್ವಲಕ್ಕೆ ಕಾರಣವಾಗುತ್ತದೆ ಎಂದು ನೀರಿನ ಅನೇಕ ವಿಭಾಗಗಳ ಕುರಿತಾಗಿ ವಿವರಿಸಿದರು.

ಜೀವನದಲ್ಲಿ ಸುಲಭದ ದಾರಿಯನ್ನು ಹುಡುಕದೆ, ಸರಿಯಾದ ದಾರಿಯನ್ನೇ ಆಯ್ಕೆ ಮಾಡಬೇಕು. ಶಾಸ್ತ್ರಗಳು ಬೋಧಿಸಿರುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಯತ್ನಪೂರ್ವಕವಾಗಿ ಜೀವನ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಂಪತಿ, ಉದ್ಯಮಿ ಆನಂದ್, ಹೈದರಾಬಾದಿನ ರಾಘವಲು, ಧಾರವಾಡದ ಸಿದ್ಧ ಸಮಾಧಿ ಯೋಗ ಸಮಾಜದ ಸದಸ್ಯರು ಶ್ರೀಗಳ ಆಶೀರ್ವಾದ ಪಡೆದರು. ಶೇಷಗಿರಿ ಹೆಬ್ಬಾರ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಗುರುಪ್ರಕಾಶ ಹೆಗಡೆ ಕೂಜಳ್ಳಿ ದಂಪತಿ ಉಪಸ್ಥಿತರಿದ್ದರು.

ಸಿದ್ಧಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಸಿದ್ದಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಸಿದರು. ಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಸಿದ್ದಿ ಸಮಾಜದ ಜೊತೆಗೆ ಶ್ರೀಮಠ ಇರಲಿದ್ದು, ಗುರು ಪರಂಪರೆಯ ಅನುಗ್ರಹದಿಂದ ಸಮಾಜದ ಕಷ್ಟಗಳು ಕರಗಲಿ ಎಂದು ಆಶೀರ್ವದಿಸಿದರು. ಶಿವಾನಂದ ಸಿದ್ದಿ, ನರಸಿಂಹ ಸಿದ್ದಿ, ಕೃಷ್ಣ ಸಿದ್ದಿ, ನಾರಾಯಣ ಸಿದ್ದಿ ಸೇರಿದಂತೆ ಸಮಾಜದ ಪ್ರಮುಖರು, ಗುರುಬಂಧುಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !