September 12, 2026
Saturday, September 12, 2026
spot_img

ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ಇಂದು ಸಂಜೆ ಮೋದಿ ಜತೆ ಹೈ-ವೋಲ್ಟೇಜ್ ಮೀಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಲ್ವಾನ್ ಸಂಘರ್ಷ ಹಾಗೂ ಅರುಣಾಚಲ ಪ್ರದೇಶದ ಗಡಿ ವಿಚಾರದ ನಂತರ ಭಾರತ ಮತ್ತು ಚೀನಾ ನಡುವೆ ಬಿಗಿ ವಾತಾವರಣವಿತ್ತು. ಆದರೆ ಈಗ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯು ಉಭಯ ದೇಶಗಳ ಬಾಂಧವ್ಯಕ್ಕೆ ಹೊಸ ತಿರುವು ನೀಡಲು ವೇದಿಕೆ ಸಜ್ಜುಗೊಳಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬರೋಬ್ಬರಿ ಏಳು ವರ್ಷಗಳ ನಂತರ ಇಂದು ಭಾರತಕ್ಕೆ ಆಗಮಿಸುತ್ತಿದ್ದು, ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೈ-ವೋಲ್ಟೇಜ್ ಮೀಟಿಂಗ್ ನಡೆಸಲಿದ್ದಾರೆ.

7 ವರ್ಷಗಳ ಬಳಿಕ ಜಿನ್‌ಪಿಂಗ್ ಭಾರತ ಭೇಟಿ

ವಿಶೇಷ ಏನೆಂದರೆ, ಬರೋಬ್ಬರಿ ಏಳು ವರ್ಷಗಳ ನಂತರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾರತದ ಮಣ್ಣಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಕೊನೆಯದಾಗಿ ಇವರು 2019 ರಲ್ಲಿ ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆದ ಅನೌಪಚಾರಿಕ ಸಭೆಗೆ ಭಾರತಕ್ಕೆ ಬಂದಿದ್ದರು. ಇಂದು ಮಧ್ಯಾಹ್ನ ಸುಮಾರು 1.00 ಗಂಟೆಗೆ ದೆಹಲಿಗೆ ಬಂದಿಳಿಯಲಿರುವ ಜಿನ್‌ಪಿಂಗ್, ಸಂಜೆ 5.45 ಕ್ಕೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಗಂಭೀರ ಚರ್ಚೆ ನಡೆಸಲಿದ್ದಾರೆ. ಕಜಾನ್ ಮತ್ತು ಟಿಯಾಂಜಿನ್ ಸಭೆಗಳ ನಂತರ, ಮೋದಿ-ಜಿನ್‌ಪಿಂಗ್ ಇದೇ ಮೊದಲು ಮುಖಾಮುಖಿಯಾಗುತ್ತಿದ್ದಾರೆ.

ʼಒಳ್ಳೆಯ ನೆರೆಹೊರೆಯವರಾಗಿರೋಣ’ ಎಂದ ಚೀನಾ

ಈ ಹೈ ಪ್ರೊಫೈಲ್ ಮೀಟಿಂಗ್‌ಗೂ ಮುನ್ನವೇ ಚೀನಾ ಭಾರತಕ್ಕೆ ಸ್ನೇಹದ ಸಂದೇಶ ರವಾನಿಸಿದೆ. “ನಾವಿಬ್ಬರೂ ದೀರ್ಘಕಾಲದ ಸ್ನೇಹಕ್ಕೆ ಒತ್ತು ಕೊಡಬೇಕು ಮತ್ತು ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು” ಎಂದು ಚೀನಾ ಹೇಳಿದೆ. ಈ ಬಗ್ಗೆ ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, “ಭಾರತದ ಜತೆ ಕಾರ್ಯತಂತ್ರದ ಸಂಬಂಧವನ್ನು ಗಟ್ಟಿಗೊಳಿಸಲು ಚೀನಾ ಸಿದ್ಧವಿದೆ. ನಾವಿಬ್ಬರೂ ಒಳ್ಳೆಯ ನೆರೆಹೊರೆಯವರಂತೆ ಪರಸ್ಪರ ಸಹಾಯ ಮಾಡುತ್ತಾ ಮುನ್ನಡೆಯಬೇಕು” ಎಂದು ಹೇಳಿದ್ದಾರೆ.

ಜಾಗತಿಕ ಯುದ್ಧಗಳ ಮಧ್ಯೆ ಬ್ರಿಕ್ಸ್ ಒಕ್ಕೂಟದ ಶಕ್ತಿ

ಇಡೀ ಜಗತ್ತು ಇರಾನ್-ಅಮೆರಿಕ ಸಂಘರ್ಷ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದ ತತ್ತರಿಸುತ್ತಿರುವ ಈ ಹೊತ್ತಿನಲ್ಲಿ, ಬ್ರಿಕ್ಸ್ ಒಕ್ಕೂಟವು ಜಾಗತಿಕ ಶಾಂತಿಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ. ಭಾರತದ ಅಧ್ಯಕ್ಷತೆಯಲ್ಲಿ ಸೆ. 12 ಮತ್ತು 13 ರಂದು ದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಗ್ಲೋಬಲ್ ಸೌತ್ ಪರವಾಗಿ ಧ್ವನಿ ಎತ್ತಲು ಇದು ಮುಖ್ಯ ವೇದಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !